ಕಾಯಂಗೆ ಆಗ್ರಹಿಸಿ ೧೬ ಸಾವಿರ ಪೌರಕಾರ್ಮಿಕರಿಂದ ಪ್ರತಿಭಟನೆ ಬಿಬಿಎಂಪಿ ಆವರಣ ಸ್ವಚ್ಛಗೊಳಿಸದೆ ಬಿಟ್ಟರು!
ಬೆಂಗಳೂರು ಸೆ.೬: ೧೬ ಸಾವಿರ ಪೌರಕಾರ್ಮಿಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸಿ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇಂದು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿದ ಪೌರಕಾರ್ಮಿಕರು, ಕೆಲಸಕ್ಕೆ ಹಾಜರಾಗದೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಇಂದು ಪೌರಕಾರ್ಮಿಕರ ಪ್ರತಿಭಟನೆ ಹಿನ್ನಲೆ ಬೆಂಗಳೂರಿನ ಮನೆ ಮನೆಯಿಂದ ಕಸ ಸಂಗ್ರಹಣೆ, ಕಸ ಗುಡಿಸುವ ಕೆಲಸ ಬಂದ್ ಆಗಿದೆ. ಅಲ್ಲದೆ ಪೌರಕಾರ್ಮಿಕರು ಬಿಬಿಎಂಪಿ ಆವರಣವನ್ನು ಸ್ವಚ್ಛಗೊಳಿಸದೆ ಧರಣಿ ನಡೆಸಿದ್ದಾರೆ. ಇತ್ತ ಶಾಸಕರು, ಸಚಿವರ ಮನೆಯಿಂದ ಕೂಡ ಕಸ ಸಂಗ್ರಹ ಮಾಡದೆ, ೧೬ ಸಾವಿರ ಜನ ಪೌರಕಾರ್ಮಿಕರು, ೧೦ ಸಾವಿರ ಕಸದ ಆಟೋ-ಟಿಪ್ಪರ್ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯದಲ್ಲಿರುವ ಎಲ್ಲ ಪೌರಕಾರ್ಮಿಕರನ್ನು ಖಾಯಂ ಮಾಡುವಂತೆ ಒತ್ತಾಯಿಸಿ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ. ಖಾಯಂ ಮಾಡದಿದ್ದರೆ ಮುಂದಿನ ತಿಂಗಳು ಅನಿರ್ದಿಷ್ಟಾವಧಿ ಧರಣಿ ಮಾಡುತ್ತೇವೆ ಎಂದು ಪೌರಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿಕೆ ನೀಡಿದ್ದಾರೆ.



Post Comment