ಕಳೆದು ಹೋದ ಸಮಯ ಮತ್ತೆಂದೂ ಮರಳಿ ಬಾರದು: ಸಾಹಿತಿ ಬನ್ನೂರು ರಾಜು.
ನಂಜನಗೂಡು 04 : ಸಮಯ ಎಂಬುದು ಬಹಳ ಅಮೂಲ್ಯ ವಾದದ್ದು. ಒಮ್ಮೆ ಅದು ಕಳೆದು ಹೋದರೆ ಮತ್ತೆಂದೂ ಅದು ಮರಳಿ ಬಾರದು. ಹಾಗಾಗಿ ವ್ಯರ್ಥವಾಗಿ ಕಾಲ ಕಳೆಯದೆ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳು ಸಮಯವನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.
ಪಟ್ಟಣದ ಪ್ರತಿಷ್ಠಿತ ವಿದ್ಯಾ ಸಂಸ್ಥೆಗಳಲ್ಲೊಂದಾದ ಶ್ರೀನೀಲಕಂಠೇಶ್ವರ ಆಂಗ್ಲ ಮಾಧ್ಯಮ ಶಾಲೆ ಮತ್ತು ಮೈಸೂರಿನ ಹಿರಣ್ಮಯಿ ಪ್ರತಿಷ್ಠಾನ ಸಂಯುಕ್ತವಾಗಿ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ ನೂತನ ವರ್ಷದ ಸಂಭ್ರಮಾಚರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇದು ವೇಗದ ಯುಗವಾಗಿದ್ದು ಕ್ಷಣ ಕ್ಷಣಕ್ಕೂ ಕಾಲ ಮಿಂಚಿನಂತೆ ಓಡುತ್ತಿರುತ್ತದೆಯಾದ್ದರಿಂದ ಕಾಲ ಇದ್ದಾಗಲೇ ಸಾಧನೆಯ ಮೆಟ್ಟಿಲುಗಳನ್ನು ಏರುವ ಪ್ರಯತ್ನ ಮಾಡಬೇಕೆಂದರು.
ಪ್ರತಿಯೊಬ್ಬ ವಿದ್ಯಾರ್ಥಿಗೂ ಇದು ಓದುವ ವಯಸ್ಸು.ಈಗ ಎಲ್ಲರಿಗೂ ಓದುವುದೇ ಕೆಲಸವಾಗಬೇಕು. ಮುಂದೆ ಇದೇ ಓದು ಉದ್ಯೋಗವನ್ನೂ ಹಾಗೂ ಉತ್ತಮ ಭವಿಷ್ಯವನ್ನೂ ಕಟ್ಟಿಕೊಡುತ್ತದೆ.ತಂದೆ ತಾಯಿಗಳು ಗುರು ಹಿರಿಯರ ಆಶಯವನ್ನು ಅರ್ಥ ಮಾಡಿಕೊಂಡು ಒಂದು ನಿರ್ದಿಷ್ಟ ಗುರಿಯೊಡನೆ ವಿದ್ಯಾರ್ಥಿಗಳು ಕಾಲ ಪ್ರಜ್ಞೆಯೊ ಡನೆ ಓದಿನತ್ತ ಆಸಕ್ತಿ ತಾಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜೀವನದ ವಿದ್ಯಾಭ್ಯಾಸದ ಹಾದಿಯಲ್ಲಿ ಈಗ ಇಪ್ಪತ್ತು, ಇಪ್ಪತೈದು ವರ್ಷಗಳು ಕಷ್ಟಪಟ್ಟು ಓದಿದರೆ ಮುಂದಿನ ಎಪ್ಪತೈದು ವರ್ಷಗಳು ಸುಖದಿಂದ ಇರಬಹುದೆಂದು ಹೇಳಿದರು.
ಶ್ರೀ ನೀಲಕಂಠೇಶ್ವರ ವಿದ್ಯಾಸಂಸ್ಥೆಯ ಹಿರಿಯರಾದ ಮಾದಮ್ಮ ಹಾಗೂ ಶಿವಮ್ಮ ಅವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಖ್ಯಾತ ಮುಕ್ತಕ ಕವಿ ಎಂ.ಮುತ್ತು ಸ್ವಾಮಿ ಮತ್ತು ಶಾಲೆಯ ಶಿಕ್ಷಕಿ ಶೋಭಾ ರಾಣಿ ಹಾಗೂ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎನ್. ಎಂ. ಕುಮಾರಸ್ವಾಮಿ ಅವರುಗಳು ಮಾತನಾಡಿ ವಿದ್ಯಾರ್ಥಿಗಳಿಗೆ ಹಿತವಚನ ಹೇಳಿದರು. ಇದೇ ವೇಳೆ ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ನಡೆಸಲಾದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರತಿಷ್ಠಾನದ ಅಧ್ಯಕ್ಷರೂ ಆದ ಖ್ಯಾತ ಶಿಕ್ಷಣ ತಜ್ಞ ಎ.ಸಂಗಪ್ಪ ಅವರು ಬಹುಮಾನ ವಿತರಿಸಿ ಗೌರವಿಸಿದರು. ವಿದ್ಯಾರ್ಥಿಗಳೆಲ್ಲರ ಪರವಾಗಿ 10ನೇ ತರಗತಿ ವಿದ್ಯಾರ್ಥಿನಿ ಎಸ್. ದಿವ್ಯಶ್ರೀ ಕಾರ್ಯಕ್ರಮ ಕುರಿತು ಮಾತನಾಡಿ ನೆರೆದಿದ್ದವರ ಮೆಚ್ಚುಗೆ ಗಳಿಸಿದರು. ಮುಖ್ಯ ಶಿಕ್ಷಕಿ ರಾಜೇಶ್ವರಿ ಅವರು ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಶೋಭಾರಾಣಿ,ಮಂಜುಳಾ, ಲತಾ, ಕುಮಾರಸ್ವಾಮಿ, ಮಂಜುಳಾ ಕುಮಾರಸ್ವಾಮಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ವಿದ್ಯಾರ್ಥಿ ಎನ್.ವಿ.ಗಗನ್ ಪ್ರಾರ್ಥನೆ ಮಾಡಿದರೆ, ಎಸ್.ವರ್ಷಾ ಪ್ರಾಸ್ತಾವಿಕವಾಗಿ ಮಾತನಾಡಿ ಗಣ್ಯರೆಲ್ಲರನ್ನೂ ಸ್ವಾಗತಿಸಿದರು. ಕೊನೆಯಲ್ಲಿ ಆರ್. ಹರ್ಷಿತಾ ವಂದನಾರ್ಪಣೆ ಮಾಡಿದರು.



Post Comment