Loading Now

ನೂತನ ತಾಲೂಕು ಘಟಕ ಉದ್ಗಾಟನ ಕಾರ್ಯಕ್ರಮ.

ಹನೂರು ನ 28 : ಪರಿಶಿಷ್ಟ ಜಾತಿ ಮೀಸಲಾತಿ ಅಡಿಯಲ್ಲಿ ಅನುಕೂಲವನ್ನು ಪಡೆದುಕೊಳ್ಳುವ 101 ಜಾತಿಗಳ ಪೈಕಿ ಬೆರಳೆಣಿಕೆಯಷ್ಟು ಪರಿಶಿಷ್ಟ ಜಾತಿ ಉಪಜಾತಿಗೆ ಸೇರುವ ಮಂದಿ ಡಾ. ಬಿ.ಆರ್.ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅಳವಡಿಸಿಕೊಂಡಿರುವುದರ ಜೊತೆಗೆ ಹೋರಾಟಗಳಲ್ಲಿ ಭಾಗಿಯಾಗುತ್ತಾರೆ. ಉಳಿದ ಜನ ಕ್ಯಾಟಗಿರಿಯಲ್ಲಿ ಗುರುತಿಸಿಕೊಳ್ಳುವುದಕ್ಕೂ ಹಿಂದೆ ಸರಿಯುವುದು ವಿಷಾಧನಿಯ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾಲ್ ವಿಷಾದ ವ್ಯಕ್ತಪಡಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಛಲವಾದಿ ಮಹಾಸಭಾ ನೂತನ ತಾಲೂಕು ಘಟಕ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸಮುದಾಯದ ಮೀಸಲಾತಿ ಹಕ್ಕುಗಳ ಹೋರಾಟ, ಸಂವಿಧಾನ ರಕ್ಷಣೆ ಮುಂತಾದ ವಿಚಾರಗಳಿಗೆ ಅನೇಕ ದಲಿತ ಪರ ಸಂಘಟನೆಗಳು ಮುಂಚೂಣಿಯಲ್ಲಿ ನಿಲ್ಲುತ್ತವೆ. ಈ ಪೈಕಿ ದಲಿತ ಸಂಘರ್ಷ ಸಮಿತಿ, ಛಲವಾದಿ ಮಹಾಸಂಘ ಇನ್ನಿತರೆ ಸಂಘಟನೆಗಳು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿವೆ. ಪರಿಶಿಷ್ಟ ಜಾತಿ ಅಡಿ 18ಕ್ಕಿಂತ ಹೆಚ್ಚು ಎಂಎಲ್ಎಗಳು, ವಿವಿಧ ಸರ್ಕಾರಿ ಇಲಾಖೆಯಲ್ಲಿ ಅಧಿಕಾರಿಗಳು ನೇಮಕಗೊಂಡಿದ್ದಾರೆ. ಅವರೆಲ್ಲರೂ ಸವಲತ್ತುಗಳನ್ನು ಪಡೆದುಕೊಂಡರಷ್ಟೇ ಸಾಲದು ಸಮುದಾಯದ ಪರವಾಗಿ ಇರಬೇಕಾಗುತ್ತದೆ. ಬಾಬಾ ಸಾಹೇಬರ ಉದ್ದೇಶ ಜಾತಿ ನಿರ್ಮೂಲನೆ, ಸಮಾನತೆಯಾಗಿತ್ತು. ಆದರೆ ಅನಿಷ್ಟ ಜಾತಿ ಪದ್ಧತಿ, ಅಸಮಾನತೆ ತಾಂಡವಾಡುತ್ತಿದೆ. ಬಲಗೈ ಎಡಗೈ ಎನ್ನುವ ಛಲವಾದಿಗಳು ಜನಸಂಖ್ಯೆಯಲ್ಲಿ ಹೆಚ್ಚಿದ್ದರು ಕೂಡ ಮೀಸಲಾತಿಯ ಅನುಕೂಲಗಳನ್ನು ಸಮರ್ಪಕವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ.

ಮಠಮಾನ್ಯಗಳ ಹೆಸರಿನಲ್ಲಿ ಜಾತಿಗಳನ್ನು ಪ್ರತಿನಿಧಿಸುವ ಜನತೆ ಸರ್ಕಾರದ ಮೇಲೆ ಒತ್ತಡ ತಂದು ಅನುಕೂಲನ್ನು ಪಡೆದುಕೊಳ್ಳುವ ಪರಿಸ್ಥಿತಿ ಬಂದೊದಗಿದೆ. ಆದರೆ ಈ ರೀತಿ ಆಗಬಾರದಿತ್ತು. ಸಮುದಾಯದ ಜನತೆ ಯಾವುದೇ ಪಕ್ಷಗಳಲ್ಲಿ ತೊಡಗಿಕೊಂಡರು. ತಲೆಕೆಡಿಸಿಕೊಳ್ಳಬಾರದು. ಆದರೆ ಅವರೆಲ್ಲರೂ ಸಮುದಾಯದ ಹಿತಕ್ಕಾಗಿ ಒಗ್ಗಟ್ಟಾಗಬೇಕು ಹಾಗೂ ಏಳಿಗೆಗೆ ಶ್ರಮಿಸಬೇಕು. ಛಲವಾದಿ ರಾಜ್ಯಾಧ್ಯಕ್ಷರಾಗಿರುವ ಕೆ. ಶಿವರಾಂ ಅವರು ತಮ್ಮ ಅಧಿಕಾರವಧಿಯಲ್ಲಿ ಹಾಗೂ ನಂತರದ ದಿನಗಳಲ್ಲಿ ದಲಿತರಿಗೆ ಅಲ್ಲದೆ ಶೋಷಿತರು ಬಡವರ ಪರವಾದ ಕಾಳಜಿಯನ್ನು ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಅವರು ಛಲವಾದಿ ಭವನ, ಮೆಡಿಕಲ್ ಕಾಲೇಜು, ಉನ್ನತ ಶಿಕ್ಷಣ ನೀಡುವ ಕಾಳಜಿಯನ್ನು ಹೊಂದಿದ್ದಾರೆ. ಅವರಿಗೆ ನಮ್ಮ ಬೆಂಬಲವಿದೆ. ಪ್ರಸ್ತುತ ಸ್ಥಿತಿಯಲ್ಲಿ ನಾವೆಲ್ಲ ಒಗ್ಗಟ್ಟಾಗಬೇಕಾಗಿದೆ. ಛಲವಾದಿಗಳಲ್ಲಿ ಸರ್ಕಾರಿ ಕೆಲಸದಲ್ಲಿರುವವರ ನೊಂದಣಿ ವ್ಯವಸ್ಥೆಯನ್ನು ಮಾಡಬೇಕು. ಆ,ಮೂಲಕ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಯನ್ನು ಪಡೆಯಬೇಕು ಎಂದರು.

ಡಿ.ವೈ.ಎಸ್.ಪಿ. ಮಹಾನಂದ ಅವರು ಮಾತನಾಡಿ, ಛಲವಾದಿಗಳಲ್ಲಿ ಹೆಸರಿನಲ್ಲಿರುವಂತೆ ಛಲ ಮತ್ತು ವಾದ ಇದೆ. ನಮ್ಮಲ್ಲಿ ಹೊಡೆದಿರುವ ಮನಸುಗಳು ಒಂದಾಗಬೇಕು. ಸಂಘಟನೆಯನ್ನು ಶಕ್ತಿಯುತವಾಗಿ ಮಾಡಬೇಕು ಹೊರತು ಅಸಕ್ತವಾಗಿ ಮಾಡಬಾರದು. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಗಳ ನಿರ್ಮಾಣ ಮಾಡಿರುವ ನಾನು ಮತ್ತು ಓಲೆ ಮಾದೇವ ಅವರು ನಮ್ಮ ಕರ್ತವ್ಯನಷ್ಟೇ ಮಾಡಿದ್ದೇವೆ. ಬಾಬಾ ಸಾಹೇಬರ ತ್ಯಾಗ, ಬಲಿದಾನ, ಹೋರಾಟದ ಮುಂದೆ ಇವೆಲ್ಲಾ ನಗಣ್ಯ. ಪ್ರತಿಮೆ ಜೊತೆಗೆ ಲೈಬ್ರರಿ, ಆಸ್ಪತ್ರೆ, ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಬೇಕಾಗಿದೆ. ಸುಸ್ಥಿತಿಯಲ್ಲಿರುವ ಪ್ರತಿಯೊಬ್ಬರೂ ಸಮುದಾಯದ ಶಿಕ್ಷಣ, ಸಂಘಟನೆಗಳಿಗೆ ಬೆಂಬಲವಾಗಿ ನಿಲ್ಲಬೇಕು. ಅಂತಹ ಅವಕಾಶಗಳು ಸಿಕ್ಕಿರುವವರು ಸದುಪಯೋಗಪಡಿಸಿಕೊಳ್ಳಿ.
ಬಾಬಾ ಸಾಹೇಬರು ನಾವು ಏನು ಕೇಳಿದರು ಕೊಡುವುದನ್ನು ಕಲಿಸಿಕೊಟ್ಟಿದ್ದಾರೆ. ಸ್ವಾಭಿಮಾನಕ್ಕೆ ಹೆಸರುವಾಸಿಯಾದ ಅಂಬೇಡ್ಕರ್ ರವರು ತಲೆಯೆತ್ತಿ ನಡೆಯುವಂತೆ ಮಾಡಿದ್ದಾರೆ. ಛಲವಾದಿ ಸಂಘಟನೆ ಸಂಘಟನೆ ಒಳ್ಳೆಯ ಕಾರ್ಯಗಳನ್ನು ಕೈಗೊಳ್ಳುತ್ತಾ ಮಾದರಿಯಾಗಲಿ ಎಂದರು.

ಛಲವಾದಿ ಮಹಾಸಭಾ ರಾಜ್ಯ ಉಪಾಧ್ಯಕ್ಷ ಅಣಗಳ್ಳಿ ಬಸವರಾಜು ಅವರು ಪ್ರಸ್ತಾವಿಕ ನುಡಿಗಳನ್ನಾಡಿ, ಕೆ ಶಿವರಾಮ ಅವರು ಅಧಿಕಾರದ ಅವಧಿಯಲ್ಲಿ ರಚನೆಗೊಂಡ ಛಲವಾದಿ ಮಹಾಸಭಾ ಸಂಘಟನೆಗೆ ಬೇರೆಯೊಬ್ಬರ ಸಾರಥ್ಯವನ್ನು ವಹಿಸಲಾಗಿತ್ತು. ಕೆ ಶಿವರಾಂ ಅವರು ನಿವೃತ್ತಿಯಾದ ನಂತರ ಅವರ ನಾಯಕತ್ವದಡಿ ಸಂಘಟನೆ ನಡೆಸಲು ಮುಂದಾದಾಗ ಅಡೆತಡೆಗಳಾದವು. ಈ ದಿಸೆಯಲ್ಲಿ ನ್ಯಾಯಾಲಯದ ಮಾರ್ಗದರ್ಶನದಲ್ಲಿ ಚುನಾವಣೆಯನ್ನು ನಡೆಸಿ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರು ಸಮುದಾಯದ ಒಳಿತಿಗೆ ಅನೇಕ ಅನುಕೂಲಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆ ತಾಲೂಕು ಕೇಂದ್ರಗಳಲ್ಲಿ ಛಲವಾದಿ ಮಹಾಸಭಾ ಘಟಕವನ್ನು ತೆರೆಯಲು ಮುಂದಾಗಿದ್ದಾರೆ. ಕೆ ಶಿವರಾಮ ಅವರು ಅನೇಕ ಜನ ಪರ ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಇನ್ನೂ ಅನೇಕ ಯೋಜನೆಗಳನ್ನು ರೂಪಿಸಿದ್ದಾರೆ. ಇತರೆ ಸಮುದಾಯಗಳ ನಾಯಕರು ಅಧಿಕಾರಿಗಳು ಸಮುದಾಯದ ಒಳಿತಿಗೆ ಒಗ್ಗಟ್ಟಾಗುತ್ತಾರೆ ಅದೇ ರೀತಿ ನಾವು ನಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಮುದಾಯಕೋಸ್ಕರ ಶ್ರಮಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉಪ ನೋಂದಣಿ ಅಧಿಕಾರಿ ಅಜ್ಜಿಪುರ ಶಿವಶಂಕರ ಮೂರ್ತಿ, ರೇಷ್ಮೆ ಇಲಾಖೆ ನಿವೃತ್ತ ಅಧಿಕಾರಿ ದೇವರಾಜು, ಓಲೆ ಮಾದೇವ ಪ.ಪಂ ಸದಸ್ಯ ಮಹೇಶ್,
ಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕನಕರಾಜು, ಛಲವಾದಿ ಮಹಾಸಭಾ ಕಾರ್ಯದರ್ಶಿ ಹಂಸರಾಜ್, ಸಿದ್ದಪ್ಪ, ಮುಖ್ಯ ಶಿಕ್ಷಕ ಮಾದೇಶ್, ಚಾಮರಾಜನಗರ ಜಿಲ್ಲಾ ಸಂಘಟನೆಯ ಸುಶೀಲ, ಶಿವನಂಜಯ್ಯ, ಗುಂಡಾಪುರ ಸೋಮಣ್ಣ, ಮಂಗಲ ಮಂಟೇಸ್ವಾಮಿ, ಯಜಮಾನರಾದ ಸಿದ್ದರಾಜು, ಲಿಂಗರಾಜು, ಚಿಕ್ಕಣ್ಣ, ಮುಖಂಡರುಗಳಾದ ಬಸವರಾಜು, ಪ್ರಭು, ನಂಜಪ್ಪ ಇನ್ನಿತರೆ ಮುಖಂಡರುಗಳು ಸೇರಿದಂತೆ ಛಲವಾದಿ ಮಹಾಸಭಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Post Comment

You May Have Missed