Loading Now

ಶ್ರಾವಣ ಬಂತು ಶ್ರಾವಣ..!

ಆಷಾಢದ ಗಾಳಿಗೆ ಮೈಮನದ ಜಡ್ಡನ್ನು ತೂರಿಬಿಟ್ಟು, ಶ್ರಾವಣದ ಚೈತನ್ಯವನ್ನು ಮನಸ್ಸು ಹೀರತೊಡಗಿದೆ. ಚುಮು ಚುಮು ಚಳಿಗೂ ಬೆಚ್ಚನೆಯ ಭಾವ ಮೂಡಿದೆ. ಆಷಾಢದಲ್ಲಿ ದೂರವಾಗಿದ್ದ ನವದಂಪತಿಗಳ ನೋವು ಅದಕ್ಕೂ ತಿಳಿದಿರಬೇಕು! ಮಳೆ ಬಿಸಿಲ ಚೆಲ್ಲಾಟ ಶುರುವಾಗಿದೆ. ಭೂಮಿಯು ಹಸಿರು ಸೀರೆ ಉಟ್ಟಾಗಿದೆ. ಈ ಸಂವತ್ಸರದ ಶ್ರಾವಣ ಹೆಗಲ ಮೇಲೆ ಹಬ್ಬಗಳ ಹೊತ್ತು ಬಂದಾಗಿದೆ. ಇನ್ನು ಹೆಂಗಳೆಯರ ಸಂಭ್ರಮಕ್ಕೆ ಕಡಿವಾಣ ಹಾಕುವವರಾರು?!. ಸೀರೆ, ಒಡವೆ, ಗಾಜಿನ ಬಳೆಗಳ ಭರಾಟೆ ಜೋರಾಗಿದೆ. ಬಣ್ಣಬಣ್ಣದ ಹೂವುಗಳು, ನಾನಾ ನಮೂನೆಯ ಹಣ್ಣುಗಳು, ಬಾಳೆಕಂದು, ಬಾಳೆಎಲೆ, ವೀಳ್ಯದೆಲೆಗಳ, ಮಾವಿನೆಲೆಗಳ ಸುಗ್ಗಿಯನ್ನು ಮಾರುಕಟ್ಟೆಯಲ್ಲಿ ನೋಡಿಯೇ ತಣಿಯಬೇಕು. “ಹೂವನು ಮಾರುತ ಹೂವಾಡಗಿತ್ತಿ…” ಇನ್ನು ಉತ್ಸಾಹದಿಂದ ಹಾಡುವಳು! ಅವರಿಗೂ ಇದು ದುಡಿಮೆಯ ಕಾಲ. ಮಂಗಳ ಗೌರಿ, ಶುಕ್ರ ಗೌರಿ, ನಾಗರ ಪಂಚಮಿ, ವರಮಹಾಲಕ್ಷ್ಮಿ, ರಕ್ಷಾ ಬಂಧನ ಮೊದಲಾದ ಹಬ್ಬಗಳು ಸರತಿಸಾಲಿನಲ್ಲಿವೆ. “ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ…” ಮನದಲ್ಲಿ ಬೇಂದ್ರೆಯವರ ಹಾಡಿನದೇ ರಿಂಗಣ..! ಎಲ್ಲೆಲ್ಲೂ ಸಡಗರದ ಗೆಜ್ಜೆ ನಾದ..! ಮನೆಯನ್ನು ಸಾರಿಸಿ, ಗುಡಿಸಿ, ಒಪ್ಪ ಓರಣವಾಗಿಸಿ, ಅಲಂಕರಿಸಿದಾಗ ಸಿಗುವ ಆನಂದ ಬೇರೆಲ್ಲೂ ಸಿಗಲಾರದು.

ಸ್ವಚ್ಛತೆ ಇರುವಲ್ಲಿ ಲಕ್ಷ್ಮಿ ನೆಲೆಸುತ್ತಾಳಂತೆ! ಲಕ್ಷ್ಮಿ ಶಾಶ್ವತವಾಗಿ ಮನೆಯಲ್ಲಿ ನೆಲೆಸಲೆಂದು, ಮಂಗಳಗೌರಿ ಮಂಗಳವುಂಟುಮಾಡಲೆಂದುಆರಾಧಿಸುವ ಪುಣ್ಯಕಾಲ ಈ ಶ್ರಾವಣ. ಪೂಜೆ, ಅಲಂಕಾರಗಳನ್ನು ಎಲ್ಲರಿಗಿಂತಲೂ ಚೆನ್ನಾಗಿ, ವಿಭಿನ್ನವಾಗಿ ಮಾಡಬೇಕೆಂಬ ಉತ್ಸಾಹ ಹೆಂಗಳೆಯರಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಮನೆಯ ಮುಂದಿನ ರಂಗೋಲಿ ಅವಳ ಮನಸ್ಸನ್ನು ಪ್ರತಿಬಿಂಬಿಸುತ್ತದೆ! ಬಗೆಬಗೆಯ ತಿಂಡಿ ತಿನಿಸುಗಳು ಮಕ್ಕಳನ್ನು ಕುಣಿದು ಕುಪ್ಪಳಿಸುವಂತೆ ಮಾಡುತ್ತವೆ.. “..ಬಂತು ಶ್ರಾವಣ..ಓ ಬಂತು ಶ್ರಾವಣ..!”

ಹೌದು! ಬರಡಾದ ಬದುಕಿಗೆ ಬಣ್ಣ ತುಂಬುವ ಈ ಹಬ್ಬಗಳ ಅವಶ್ಯಕತೆ ತುಂಬಾ ಇದೆ. ಮನೆಯ ಕಸ, ಧೂಳಿನೊಂದಿಗೆ ಮನಸ್ಸೂ ಸ್ವಚ್ಛವಾಗುವುದು. ನೆಂಟರಿಷ್ಟರು ಬಂದು ಹೋಗುವ ಈ ಹಬ್ಬಗಳು ಬಾಂಧವ್ಯ ಬೆಸೆಯುವ ಕೊಂಡಿಗಳು. ವೈಮಸ್ಯವನ್ನು ದೂರ ಮಾಡುವ ಸದವಕಾಶವನ್ನು ಹಬ್ಬಗಳು ಒದಗಿಸುತ್ತವೆ. ಮುನಿಸಿಕೊಂಡ ಮುತ್ತೈದೆಯನ್ನು ಕುಂಕುಮಕ್ಕೆ ಕರೆದು ಬನ್ನಿ. ಅಲ್ಲಿಗೆ ಮನಸ್ತಾಪ ಮೈಲು ದೂರ! ಕೋಪಗೊಂಡ ನೆಂಟರ ಮನೆಗೆ ಸದ್ದಿಲ್ಲದೇ ಹೋಗಿ ಬುಟ್ಟಿ ತುಂಬ ಉಂಡೆ ಕೊಟ್ಟು ಬನ್ನಿ. ಸಂಬಂಧ ನೆಟ್ಟಗಾಗದಿದ್ದರೆ ಕೇಳಿ! ಹಿರಿಯರು ಮಾಡಿದ ಯಾವ ಆಚರಣೆಗಳೂ ಅವೈಜ್ಞಾನಿಕವಲ್ಲ. ಅವು ಒಂದಲ್ಲಾ ಒಂದು ರೀತಿಯಲ್ಲಿ ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಪುಷ್ಟಿಗೊಳಿಸುತ್ತವೆ. ಆಷಾಢದಲ್ಲಿ ನವದಂಪತಿ ದೂರವಿರಿಸುವುದಕ್ಕೂ ವೈಜ್ಞಾನಿಕ ಕಾರಣವಿದೆ. ಆಷಾಢದಲ್ಲಿ ಗರ್ಭ ನಿಂತರೆ ಬೇಸಿಗೆಯಲ್ಲಿ ಪ್ರಸವವಾಗಿ, ಆ ಮಗು ಅಂಬೆಗಾಲಿಡುವ ವೇಳೆಗೆ ಚಳಿಗಾಲ ಬಂದಿರುತ್ತೆ. ಅಂಬೆಗಾಲಿಡುವ ಮಗುವನ್ನು ಕೆಳಗೆ ಬಿಡದೆ ಹಿಡಿಯಲು ಸಾಧ್ಯವೇ? ಆಗ ಮಗುವಿಗೆ ಶೀತವಾಗಿ ತೊಂದರೆಯಾಗುತ್ತದೆ. ಅದಕ್ಕಾಗಿಯೇ ಹಿರಿಯರು ಈ ಆಚರಣೆ ತಂದಿದ್ದಾರೆಂದು ಹೇಳುತ್ತಾರೆ. ಇದನ್ನೆಲ್ಲಾ ಕೇಳುತ್ತಿದ್ದರೆ ನಮ್ಮ ಹಿರಿಯರ ಬಗ್ಗೆ ಗೌರವ, ಅಭಿಮಾನಗಳು ಮೂಡದೇ ಇರಲಾರದು ಅಲ್ಲವೇ?!

ಎಲ್ಲ ಆಚರಣೆಗಳ ಹಿಂದೆಯೂ ಇಂತಹುದೇ ಒಂದು ಕಾರಣ ಇದ್ದೇ ಇರುತ್ತದೆ. ರೈತನು ಬಿತ್ತನೆಯ ಕೆಲಸವನ್ನು ಮುಗಿಸಿ, ನಡುವಿನೆತ್ತರಕ್ಕೆ ಬೆಳೆದ ಬೆಳೆಯ ನಡುವೆ ಬಿಡುವಾಗಿರುವ ಈ ಕಾಲದಲ್ಲಿಯೇ ಹಬ್ಬಗಳ ಸಾಲು. ತಿಳಿದು ಗೌರವದಿಂದ ಆಚರಿಸೋಣ. ಮೌಢ್ಯವನ್ನು ತೊಲಗಿಸಿ, ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸೋಣ.

ಸೌಮ್ಯ ದಯಾನಂದ

Post Comment

You May Have Missed