ಅಮ್ಮಂದಿರೂ… ಬೇಸಿಗೆ ರಜೆಯೂ…
ಪರೀಕ್ಷೆ ಮುಗಿದು ವಾರಗಳು ಕಳೆದಿವೆ. “ಈ ಪರೀಕ್ಷೆಯೊಂದು ಮುಗಿದರೆ ಸಾಕಪ್ಪಾ! ಇವರನ್ನು ಹಿಡಿದು ಕೂರಿಸಿ, ಓದಿಸಿ, ಪರೀಕ್ಷೆ ಬರೆಸುವುದು ನಮಗೊಂದು ಅಗ್ನಿಪರೀಕ್ಷೆಯಂತಾಗಿದೆ!” ಎನ್ನುತ್ತಿದ್ದ ಅಮ್ಮಂದಿರಿಗೆ ಈಗ ‘ಬೇಸಿಗೆ ರಜೆ’ ಎಂಬ ಬಿಸಿಲು ಪರೀಕ್ಷೆ ಆರಂಭವಾಗಿದೆ! ಟೀಚರ್ ನ ಭಯದಿಂದ ಹೇಗೋ ಮಾತು ಕೇಳುತ್ತಿದ್ದ ಮಕ್ಕಳು ಈಗ ಯಾರ ಭಯವೂ ಇಲ್ಲದೆ ಅಮ್ಮನನ್ನು ಕಾಡುತ್ತಿವೆ. ಆಡಲು ನೆರೆಹೊರೆಯಲ್ಲಿ ಮಕ್ಕಳಿದ್ದವರಿಗೆ ರಜೆ ಮಜಾ ನೀಡುತ್ತಿದೆ. ಆದರೆ ಆಡಲು ಜೊತೆ ಸಿಗದ ಮಕ್ಕಳು ಸಮಯ ಕಳೆಯಲು ದಾರಿ ತೋರದೆ ಮೊಬೈಲ್ ಹಿಡಿದು ಕೂತಿವೆ. ಇದನ್ನು ನೋಡಲಾಗದ ಕೆಲವು ಪೋಷಕರು ಇಷ್ಟವೋ ಕಷ್ಟವೋ ಅಂತೂ ಬೇಸಿಗೆ ಶಿಬಿರಕ್ಕೆ ಮಕ್ಕಳನ್ನು ತಳ್ಳಿ ಕೊಂಚ ನೆಮ್ಮದಿ ಕಂಡುಕೊಂಡಿದ್ದಾರೆ. “ಒಳ್ಳೆಯ ಕೆಲಸವನ್ನೇ ಮಾಡಿದ್ದೇವೆ. ಮಕ್ಕಳು ಏನಾದರೂ ಉಪಯುಕ್ತ ವಿಷಯಗಳನ್ನು ಕಲಿಯುತ್ತಾರೆ” ಎಂಬ ನಂಬಿಕೆಯಲ್ಲಿದ್ದಾರೆ. ಇನ್ನು ಕೆಲವರು ಅಜ್ಜಿಯ ಮನೆ, ಮಾವನ ಮನೆ, ಚಿಕ್ಕಮ್ಮನ ಮನೆ, ಮದುವೆ, ಹಬ್ಬ, ಜಾತ್ರೆ ಅಂತ ಹೋಗಿ ಬಂದಾಯ್ತು. ಅವರೂ ಬಂದು ಹೋಗಾಯ್ತು. ಬಿಸಿಲನ್ನೂ ಲೆಕ್ಕಿಸದೆ ಪ್ರವಾಸವನ್ನೂ ಮಾಡಿದ್ದಾಯ್ತು. ಮಕ್ಕಳೀಗ ಮನೆ ಸೇರಿವೆ. ಆಗಲೇ ಅಮ್ಮಂದಿರಿಗೆ ಶಾಲೆಯ ನೆನಪು ಕಾಡಲು ಶುರುವಾಗಿದೆ. ಕೆಲಸಕ್ಕೆ ಹೋಗುವ ತಾಯಂದಿರ ಪಾಡಂತೂ ಹೇಳತೀರದು. ಮನೆಯಲ್ಲಿ ಅವರನ್ನು ಬಿಟ್ಟು ಹೋಗುವಂತಿಲ್ಲ; ಜೊತೆಯಲ್ಲಿ ಕರೆದುಕೊಂಡು ಹೋಗುವಂತಿಲ್ಲ. ಒಂದಿಲ್ಲೊಂದು ಶಿಬಿರದ ಹಾದಿ ಹಿಡಿಯುತ್ತಿದ್ದಾರೆ.
ಮಕ್ಕಳು ನಮಗಿಂತಲೂ ಬುದ್ಧಿವಂತರು. ಅವರನ್ನು ತಿಳಿದೂ ತಿಳಿಯದಂತೆ ಮೇಲ್ವಿಚಾರಣೆ ನಡೆಸಿದರೆ ಸಾಕು. “ಮಕ್ಕಳು ನೋಡುತ್ತಾ ಅನುಕರಿಸುತ್ತಾ ಕಲಿಯುವುದೇ ಹೆಚ್ಚು” ಎನ್ನುತ್ತಾರೆ ತಜ್ಞರು. ಮಕ್ಕಳೊಂದಿಗೆ ಮಕ್ಕಳು ಬೆರೆಯಲು ಬಿಡಿ. ನೀವು ಅವರೊಂದಿಗೆ ಮಗುವಾಗಿ ಆಡಿ. ಅವರ ಸೃಜನಶೀಲತೆಗೆ ಬೆರಗಾಗುತ್ತೀರಿ. ಮೊನ್ನೆ ‘ವರ್ಡ್ ಬಿಲ್ಡಿಂಗ್’ ಅಂತ ಆಡುತ್ತಿದ್ದ ಮಕ್ಕಳು ಹಾಗೆಯೇ ಆಟ ಬದಲಾಯಿಸಿ, “ನಾನೊಂದು ಕಥೆ ಆರಂಭಿಸುವೆ, ಅನುಕ್ರಮವಾಗಿ ಆ ಕತೆಯನ್ನು ಎಲ್ಲರೂ ಮುಂದುವರಿಸುತ್ತಾ ಹೋಗಿ, ಕೊನೆಯವರು ಕಥೆಯನ್ನು ಮುಗಿಸಬೇಕು” ಎಂಬ ಆಟವನ್ನು ಆಡತೊಡಗಿದರು. ನೋಡುನೋಡುತ್ತಿದ್ದಂತೆಯೇ ಎಂತಹ ಸುಂದರ ಕಥೆಗಳು ಸ್ಥಳದಲ್ಲೇ ರೂಪುಗೊಂಡವು!! ಅವರ ಕಲ್ಪನೆ, ಸೃಜನಶೀಲತೆ, ಭಾವನೆಗಳ ಅಭಿವ್ಯಕ್ತಿ ಅದ್ಭುತವಾಗಿತ್ತು! ಇನ್ನೊಂದು ದಿನ ‘ಸ್ವಚ್ಛತೆ ಮತ್ತು ಆರೋಗ್ಯ’ ಕುರಿತು ಅವರೇ ಒಂದು ನಾಟಕ ಅಭ್ಯಾಸಮಾಡಿ ಪ್ರದರ್ಶನ ನೀಡಿದರು. ಅವರ ಸಂಘಟನೆ, ಯೋಜನೆ, ನಾಯಕತ್ವದ ಗುಣಗಳಿಗೆ ಬೆರಗಾದೆನು!! ಇನ್ನೂ ಪ್ರಾಥಮಿಕ ತರಗತಿಗಳಲ್ಲಿ ಓದುವ ಮಕ್ಕಳ ಬುದ್ಧಿವಂತಿಕೆ ನಿಜಕ್ಕೂ ಮೆಚ್ಚುವಂತಿತ್ತು.
ಪೋಷಕರು ಎಲ್ಲಾ ಕೆಲಸವನ್ನು ಮುಗಿಸಿ ಮಕ್ಕಳೊಂದಿಗೆ ಆಡಲು ಕೂರುವ ಬದಲು, ಅವರನ್ನೂ ನಿಮ್ಮ ಕೆಲಸದೊಂದಿಗೆ ಸೇರಿಸಿಕೊಳ್ಳಿ. ರಜೆಯಿದೆ ಎಂದು ಹೊತ್ತು ನೆತ್ತಿಗೇರುವವರೆಗೂ ಮಲಗುವ ಬದಲು ಎಲ್ಲರೊಂದಿಗೆ ಬೇಗನೆ ಎದ್ದು ಸೂರ್ಯೋದಯವನ್ನು ನೋಡಲು ಬಿಡಿ. ಯೋಗಾಭ್ಯಾಸ ಮಾಡಿಸಿ. ಅಂಗಳದಲ್ಲಿ ಸುಂದರ ರಂಗೋಲಿಯನ್ನು ಬಿಡಿಸಿ ನಲಿಯಲಿ. ಬೆಳಗಿನ ಅಥವಾ ಸಂಜೆಯ ಎಳೆಯ ಬಿಸಿಲಿನಲ್ಲಿ ಕುಂಟೋಬಿಲ್ಲೆಯೋ, ಗೋಲಿಯೋ, ಲಗೋರಿಯೋ, ಓಡಿಯಾಡುವ ಆಟಗಳನ್ನೋ ಆಡಲಿ. ಬಿಸಿಲೇರಿದಾಗ ಚೆಸ್, ಚೌಕಾಬಾರ, ಹಾವು ಏಣಿ ಆಟ, ಅಳಗುಳಿಮಣೆ, ಲೂಡೋ, ಬಿಸಿನೆಸ್ ಆಟ, ಊನೋ ಕಾರ್ಡ್ಸ್, ಅವಣೆಕಲ್ಲು ಆಟ ಮುಂತಾದ ಆಟವಾಡಲಿ. ಈ ಆಟಗಳು ಬುದ್ಧಿಯನ್ನು ಚುರುಕುಗೊಳಿಸುವುದರೊಂದಿಗೆ ದೇಹದ ಆರೋಗ್ಯಕ್ಕೂ ಪೂರಕವಾಗುತ್ತವೆ. ಮಕ್ಕಳನ್ನು ಅಡುಗೆಮನೆಗೂ ಸೇರಿಸಿಕೊಂಡು ಸೌಟೊಂದನ್ನು ಕೊಟ್ಟು ನೋಡಿ, ಅವರ ಉತ್ಸಾಹ ಇಮ್ಮಡಿಸೀತು! ಬೇಸಿಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಹಪ್ಪಳ ಸಂಡಿಗೆ ಮಾಡುವುದನ್ನು ಮರೆಯದಿರಿ. ಇದು ಮಕ್ಕಳಿಗೆ ಎಲ್ಲಿಲ್ಲದ ಖುಷಿಯನ್ನು ಕೊಡುತ್ತದೆ. ಮನೆಯ ಮುಂದಿನ ಜಾಗದಲ್ಲಿ ಅಥವಾ ಸಣ್ಣದೊಂದು ಕುಂಡದಲ್ಲಿಯಾದರೂ ಗಿಡಗಳನ್ನು ಬೆಳೆಸಲು ಸಹಕರಿಸಿ. ಬೀಜ ಮೊಳೆತು ಗಿಡವಾಗಿ ಬೆಳೆದಂತೆ ಮಕ್ಕಳು ತೋರುವ ಉತ್ಸಾಹವನ್ನು ಗಮನಿಸಿ. ಮನೆಯ ಮೇಲೊಂದು ನೀರಿನ ಪಾತ್ರೆಯನ್ನು ಇರಿಸಿ, ಪಕ್ಷಿಗಳು ನೀರಿಗಾಗಿ ಅರಸಿ ಬಂದಾಗ ಅವುಗಳ ಜೀವನವನ್ನು ಪರಿಚಯಿಸಿ. ಕಾಳಜಿಯನ್ನು ಬೆಳೆಸಿ. ಮನೆಕೆಲಸದಲ್ಲಿ ಅವರಿಗೊಂದು ಪಾಲು ಇರಲಿ. ಪಾತ್ರೆ ತೊಳೆಯುವಾಗ ಸಣ್ಣಪುಟ್ಟ ತಟ್ಟೆ-ಲೋಟಗಳನ್ನೆಲ್ಲ ಅವರೇ ತೊಳೆಯಲಿ. ಅವರ ಬಟ್ಟೆಗಳನ್ನು ಅವರೇ ಒಗೆದುಕೊಳ್ಳಲಿ. ಸಂಜೆಗೊಂದು ಹೊಸ ತಿಂಡಿಯನ್ನು ಅವರೇ ತಯಾರಿಸಲಿ. ಎಲ್ಲರೂ ಮೆಚ್ಚಿಕೊಂಡಾಗ ಅವರಿಗೂ ಆತ್ಮತೃಪ್ತಿಯ ಅರಿವಾದೀತು.
ಅಪ್ಪ-ಅಮ್ಮ ಕೆಲಸ ಮಾಡುವ ಸ್ಥಳಕ್ಕೆ ಮಕ್ಕಳನ್ನೂ ಒಮ್ಮೆ ಕರೆದುಕೊಂಡು ಹೋಗಿ. ಅಪ್ಪ-ಅಮ್ಮ ಮಾಡುವ ಕೆಲಸ, ಪರಿಸರ, ಶ್ರಮ ಅವರಿಗೂ ತಿಳಿಯಲಿ. ಶಾಲೆಯ ಸ್ನೇಹಿತರಿಗೆ, ಬಂಧುಗಳಿಗೆ ಪತ್ರವನ್ನು ಬರೆಯಲಿ. ಬರೀ ಮೊಬೈಲ್, ಫೇಸ್ಬುಕ್, ವಾಟ್ಸಾಪ್ ಮೆಸೇಜ್ ಗಳ ಮಧ್ಯೆ ಪತ್ರದ ಪುಳಕ ಅವರಿಗೂ ದೊರೆಯಲಿ. ಹಾಡುವ, ನೃತ್ಯ ಮಾಡುವ ಅಭಿರುಚಿ ಇದ್ದರೆ ಅದನ್ನೂ ಮಾಡಲಿ. ಚಿತ್ರ ಬಿಡಿಸಿ, ಬಣ್ಣ ಹಚ್ಚಿ, ಬಣ್ಣದ ಕಾಗದವನ್ನು ಕತ್ತರಿಸಿ, ಆಕೃತಿಗಳನ್ನು ತಯಾರಿಸಿ, ಗ್ರೀಟಿಂಗ್ ಕಾರ್ಡ್ಸ್, ಗಿಫ್ಟ್ ಗಳನ್ನು ತಯಾರಿಸಿಟ್ಟುಕೊಂಡು, ಅವುಗಳನ್ನು ಸ್ನೇಹಿತರ ವಿಶೇಷ ದಿನಗಳಿಗೆ ಉಡುಗೊರೆಯಾಗಿ ನೀಡಬಹುದು. ಕಾಫಿ, ಟೀ, ಜ್ಯೂಸ್, ಸಣ್ಣಪುಟ್ಟ ಅಡುಗೆ ಮಾಡುವುದನ್ನು ಕಲಿತರೆ ಮುಂದೊಂದು ದಿನ ಉಪಯೋಗಕ್ಕೆ ಬರುತ್ತದೆ. ಸಂಜೆಗೊಂದು ಪುಟ್ಟ ವಾಯುವಿಹಾರವಿದ್ದರೆ ಇನ್ನೂ ಚಂದ. ರಾತ್ರಿ ಮಲಗುವಾಗ ದಿನಚರಿಯನ್ನು ಬರೆಯುವ ಅಭ್ಯಾಸ ಮಾಡಿಸಿ. ನಿಮ್ಮ ಜೀವನದ ಅನುಭವವನ್ನೋ, ಕಥೆಯನ್ನೋ ಹೇಳಿ ಮಲಗಿಸಿ. ಮಕ್ಕಳು ಪಠ್ಯದಲ್ಲಿ ಕಲಿಯುವುದಕ್ಕಿಂತಲೂ ಮನೆಯಲ್ಲಿ ಎಲ್ಲರೊಂದಿಗೆ ಕಲಿಯುವ ‘ಜೀವನ ಕಲೆ’ ಬದುಕಿಗೆ ಬಹಳ ಮುಖ್ಯವಾಗುತ್ತದೆ. ಒಟ್ಟಾಗಿ ಕೆಲಸ ಮಾಡಿ, ಒಟ್ಟಾಗಿ ಆಟವಾಡಿ ಈ ಬೇಸಿಗೆ ರಜೆಯನ್ನು ಬಾಂಧವ್ಯ ಬೆಸೆಯಲು ಉಪಯೋಗಿಸಿಕೊಳ್ಳಿ.

Post Comment