77ನೇ ಜನ್ಮದಿನಾಚರಣೆಯನ್ನು ಆಚರಿಸದ ಶಾಸಕರಾದ ಡಿ.ಸಿ.ಗೌರಿಶಂಕರ್
ತುಮಕೂರು ಫೆಬ್ರವರಿ 09 : ಮಾಜಿ ಸಚಿವರು ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿದ್ದ ದಿ.ಚನ್ನಿಗಪ್ಪ ಅವರು ಜಿಲ್ಲೆಗೆ ನೀಡಿರುವ ಕೊಡುಗೆಗಳನ್ನು ಸ್ಮರಿಸುವ ಮೂಲಕ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕೇಕ್ ಕತ್ತರಿಸಿ ಸಿಹಿ ಹಂಚಿ, 500ಕ್ಕೂ ಹೆಚ್ಚು ಮಹಿಳೆಯರಿಗೆ ಸೀರೆ ಹರಿಶಿಣ ಕುಂಕುಮ ವಿತರಿಸುವ ಮೂಲಕ ಕೋವಿಡ್ ನಿಯಮಾನುಸಾರ ಚನ್ನಿಗಪ್ಪ ಅವರ 77ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮಾಂತರ ಶಾಸಕರಾದ ಡಿ.ಸಿ.ಗೌರಿಶಂಕರ್, ರಾಜ್ಯದಲ್ಲಿ ಸಚಿವರಾಗಿ ತಮ್ಮದೇ ಆದ ಛಾಪುಮೂಡಿಸಿ, ವಿವಿಧ ಕಾರ್ಯಯೋಜನೆಗಳನ್ನು ಜಾರಿಗೆ ತಂದು ಚನ್ನಿಗಪ್ಪಾಜಿಯವರು ಇತರರಿಗೆ ಮಾದರಿಯಾಗಿದ್ದಾರೆ. ಅವರು ಹಾಕಿಕೊಟ್ಟಂತಹ ದಾರಿದೀಪದಲ್ಲಿ ನಾವು ಹೋಗುತ್ತಿದ್ದೇವೆ.
ಎಂದು ಹೇಳಿದರು.
ಚನ್ನಿಗಪ್ಪಾಜಿಯವರು ಸಚಿವರಾಗಿದ್ದಂತಹ ಸಂದರ್ಭದಲ್ಲಿ ತುಮಕೂರು ಜಿಲ್ಲೆಗೆ ಹಲವಾರು ಕೊಡುಗೆಗಳನ್ನು ನೀಡಿದ್ದು, ಅವರು ಕೊಟ್ಟಂತಹ ಕೊಡುಗೆಗಳನ್ನು ಇಂದು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ಕೆಲಸ ಇಂದು ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಹೆಚ್.ಡಿ.ಕುಮಾರಸ್ವಾಮಿಯವರನ್ನು ಪೂರ್ಣಾವಧಿಗೆ ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಕನಸನ್ನು ಹೊಂದಿದ್ದು, ಅದನ್ನು ಈಡೇರಿಸಲು ನಾವು ಯೋಜನೆಗಳನ್ನು ಹಾಕಿಕೊಳ್ಳುತ್ತೇವೆ. ಪಕ್ಷದ ವರಿಷ್ಠರ ಆದೇಶಕ್ಕಾಗಿ ನಾವು ಕಾಯುತ್ತಿದ್ದೇವೆ, ಜೂನ್ ಜುಲೈ ನಂತರ ಪಕ್ಷದ ವರಿಷ್ಠರು ನಮಗೆ ಯಾವ ರೀತಿ ಸೂಚನೆ ಕೊಡುತ್ತಾರೋ ಆ ರೀತಿ ಕೆಲಸ ಮಾಡುವುದಕ್ಕೆ ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಇದಕ್ಕೂ ಮುನ್ನ ನಗರದ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ನೀಡಿ ಚನ್ನಿಗಪ್ಪಾಜಿಯವರ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ವೇಳೆ ಆರ್ಎಂಒ ಡಾ.ವೀಣಾ, ಗೂಳೂರು ಕೃಷ್ಣೇಗೌಡ್ರು, ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಹಾಜರಿದ್ದರು.
ಜೆಡಿಎಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜಿನಪ್ಪ, ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ, ಪ್ರಧಾನ ಕಾರ್ಯದರ್ಶಿ ಮಹಾಲಿಂಗಯ್ಯ, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷರಾದ ಟಿ.ಆರ್.ನಾಗರಾಜು, ಹಾಲನೂರು ಅನಂತಕುಮಾರ್, ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ರಾಮಚಂದ್ರಯ್ಯ, ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಯುವ ಜನತಾದಳ ಅಧ್ಯಕ್ಷ ಹಿರೇಹಳ್ಳಿ ಮಹೇಶ್, ಪಾಲಿಕೆ ಮಾಜಿ ಸದಸ್ಯ ಟಿ.ಹೆಚ್. ಬಾಲಕೃಷ್ಣ, ಗೂಳೂರು ಜಿಪಂ ಜೆಡಿಎಸ್ ಅಧ್ಯಕ್ಷ ಪಾಲನೇತ್ರಯ್ಯ, ಗೂಳೂರು ಗ್ರಾಪಂ ಅಧ್ಯಕ್ಷ ಕೃಷ್ಣೇಗೌಡ್ರು, ಪಾವಗಡ ತಾಪಂ ಮಾಜಿ ಅಧ್ಯಕ್ಷ ಸೊಗಡು ವೆಂಕಟೇಶ್, ಚಲುವರಾಜ್, ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಆಜಂ, ಮುಜಾಹಿದ್, ಯಶೋಧ, ಜಯಶ್ರೀ, ಲೀಲಾವತಿ, ತಾಹೆರಾ ಕುಲ್ಸುಂ, ರಮೇಶ್ ಮುಂತಾದವರು ಭಾಗವಹಿಸಿದ್ದರು.



Post Comment