೩೫ ಲಕ್ಷ ವೆಚ್ಚದಲ್ಲಿ ಗೌಳಿಯ ಸಾಹಸ ಸನ್ನಿವೇಶನಿರ್ಮಾಪಕರಿಂದ ಕಲಾವಿದರಿಗೆ ಇನ್ಶೂರೆನ್ಸ್
ಶ್ರೀನಗರ ಕಿಟ್ಟಿ ಅವರ ಅಭಿನಯದ ಗೌಳಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಸೂರ ಅವರ ನಿರ್ದೇಶನದ ಈ ಚಿತ್ರಕ್ಕೆ ರಘು ಸಿಂಗಂ ನಿರ್ಮಾಪಕರು. ಅಪಾರ ವೆಚ್ಚದಲ್ಲಿ ಚಿತ್ರೀಕರಣ ನಡೆಸುತ್ತಿರುವ ಇವರು ಕಲಾವಿದರ ಸುರಕ್ಷತೆಗಾಗಿ ಒಂದೊಳ್ಳೇ ಕೆಲಸ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.ಈ ಚಿತ್ರದ ಭರ್ಜರಿ ಸಾಹಸ ಸನ್ನಿವೇಶಗಳ ಚಿತ್ರೀಕರಣ ನೆಲಮಂಗಲ ಬಳಿಯ ಅರಿಷಿಣಕುಂಟೆ ಸುತ್ತಮುತ್ತಲ ಏರಿಯಾಗಳಲ್ಲಿ ನಡೆಯಿತು, ಇದಕ್ಕಾಗಿ ಕಟಾವಿಗೆ ಬಂದಿದ್ದ ೩ ಎಕರೆ ಬಾಳೆತೋಟ ಹಾಗೂ ೨ ಎಕರೆ ಮೆಕ್ಕೆ ಜೋಳದ ತೋಟವನ್ನು ಗುತ್ತಿಗೆ ಪಡೆದು ಬಳಸಿಕೊಳ್ಳಲಾಗಿದೆ. ಅಲ್ಲದೆ ವಿಶೇಷ ಸೆಟ್ ಕೂಡ ಹಾಕಿ ಸುಮಾರು ೩೫ ಲಕ್ಷ ರೂ.ಗಳ ಅಪಾರ ವೆಚ್ಚದಲ್ಲಿ ಈ ಫೈಟ್ ಸೀನ್ ಚಿತ್ರೀಕರಿಸಿಕೊಳ್ಳಲಾಯಿತು. ಈ ಶೂಟಿಂಗ್‌ನಲ್ಲಿ ೧೩೦ಕ್ಕೂ ಹೆಚ್ಚು ಜನ ಸಾಹಸ ಕಲಾವಿದರು, ಹಲವಾರು ಜನ ಫೈಟರ್ಸ್ ಸಹ ಭಾಗವಹಿಸಿದ್ದರು. ಅದರಲ್ಲಿ ನೂರು ಜನ ಸಾಹಸ ಕಲಾವಿದರಿಗೆ ನಿರ್ಮಾಪಕ ರಘು ಸಿಂಗಂ ಅವರು ತಮ್ಮ ಸ್ವಂತ. ಖರ್ಚಿನಲ್ಲಿ ಇನ್‌ಷೂರೆನ್ಸ್ (ಜೀವವಿಮೆ) ಮಾಡಿಸಿಕೊಟ್ಟಿದ್ದಾರೆ. ಇತ್ತೀಚೆಗೆ ನಡೆದ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ನಿರ್ಮಾಪಕರು ಕಲಾವಿದರಿಗೆ ಎಲ್ಲಾ ರೀತಿಯ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವುದಲ್ಲದೆ, ಈ ಮೂಲಕ ಇತರೆ ನಿರ್ಮಾಪಕರಿಗೆ ಮಾದರಿಯಾಗಿದ್ದಾರೆ. ರಘು ಸಿಂಗಂ ಅವರು ಕಳೆದ ಹಲವಾರು ವರ್ಷಗಳಿಂದ ಚಿತ್ರರಂಗದ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿದ್ದವರು, ಈಗವರು ತಮ್ಮ ಪುತ್ರನ ಹೆಸರಿನಲ್ಲಿ ಸೋಹನ ಫಿಲಂ ಫ್ಯಾಕ್ಟರಿ ಬ್ಯಾನರ್ ಮೂಲಕ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಭಿನ್ನ ಪಾತ್ರಗಳ ಮೂಲಕವೇ ಗುರುತಿಸಿಕೊಂಡಿರುವ ಕಿಟ್ಟಿ ಈಗ ಗೌಳಿಯಾಗಿ ನಟಿಸುತ್ತಿದ್ದಾರೆ. ವಿಕ್ರಂ ಮೋರ್ ಸಾಹಸ ಸಂಯೋಜನೆಯಲ್ಲಿ ನಾಯಕ ಶ್ರೀನಗರ ಕಿಟ್ಟಿ ಹಾಗೂ ಖಳನಟ ಯಶ್‌ಶೆಟ್ಟಿ ಗುಂಪಿನ ನಡುವಿನ ಹೊಡೆದಾಟದ ಸೀನ್ ಇದಾಗಿತ್ತು. ಇದರ ಜೊತೆ ಚಿತ್ರದ ಶೇ.೫೦ರಷ್ಟು ಚಿತ್ರೀಕರಣ ಮುಗಿದಿದ್ದು, ೩೦ ದಿನಗಳ ಚಿತ್ರೀಕರಣ. ಬಾಕಿಯಿದೆ. ಇದೇ ಮೊದಲಬಾರಿಗೆ ಡೈರೆಕ್ಟರ್ ಕ್ಯಾಪ್ ಹಾಕಿರುವ ಸೂರ ಅವರೇ ಈ ಚಿತ್ರದ ಕಥೆ, ಚಿತ್ರಕಥೆ ರಚಿಸಿದ್ದಾರೆ. ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಹಾಲು ಮಾರುವವರನ್ನು ಗೌಳಿ ಎಂದು ಕರೆಯುತ್ತಾರೆ. ಇದೇ ನಾಯಕನ ಹೆಸರು ಕೂಡ. ಶಶಾಂಕ್ ಶೇಷಗಿರಿ ಅವರ ಸಂಗೀತ ಸಂಯೋಜನೆಯಲ್ಲಿ ಈ ಚಿತ್ರದ ಹಾಡುಗಳು ಮೂಡಿಬಂದಿವೆ. ಈ ಚಿತ್ರದಲ್ಲಿ ನಾಯಕ ಕಿಟ್ಟಿ ಉದ್ದವಾದ ಕುರುಚಲು ಗಡ್ಡ ಬಿಟ್ಟು ಕೊಂಡಿದ್ದು, ಇಡೀ ಸಿನಿಮಾದಲ್ಲಿ ಅವರದು ಇದೇ ಗೆಟಪ್ ಆಗಿರುತ್ತದೆ. ಈ ಚಿತ್ರದ ಮೂಲಕ ಜೀವನದಲ್ಲಿ ಎಮೋಷನಲ್ ಆಗಿರುವ ವ್ಯಕ್ತಿಯೊಬ್ಬನ ಜೀವನಕಥೆಯನ್ನು ನಿರ್ದೇಶಕ ಸೂರ ಅವರು ಹೇಳಹೊರಟಿದ್ದಾರೆ.



Post Comment