ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗಳಿಗೆ ವಾಲ್ಮೀಕಿ ಆಶ್ರಮ ಶಾಲೆಗಳೆಂದು ಹೆಸರು ಬದಲಾಯಿಸಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ಗುಂಡಲ್ ಜಲಾಶಯ ಕಂಚಗಳ್ಳಿ ಗ್ರಾಮ ಸೋಲಿಗ ಸಮುದಾಯದ ಜನರು ಸರ್ಕಾರಕ್ಕೆ ಮನವಿ.
ಹನೂರು: ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗಳಿಗೆ ವಾಲ್ಮೀಕಿ ಆಶ್ರಮ ಶಾಲೆಗಳೆಂದು ಹೆಸರು ಬದಲಾಯಿಸಿರುವುದನ್ನು ಹಿಂಪಡೆಯುವಂತೆ ಒತ್ತಾಯಿಸಿ ಗುಂಡಲ್ ಜಲಾಶಯ ಕಂಚಗಳ್ಳಿ ಗ್ರಾಮ ಸೋಲಿಗ ಸಮುದಾಯದ ಜನರು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ತಾಲೂಕು ಸಮೀಪದ ಸಿಂಗನಲ್ಲೂರು ಗ್ರಾಪಂ ವ್ಯಾಪ್ತಿಯ ಕಂಚಗಳ್ಳಿ ಬುಡಕಟ್ಟು ಆಶ್ರಮ ಶಾಲೆಯ ಆವರಣದಲ್ಲಿ ನೆರೆದಿದ್ದ ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಪದಾಧಿಕಾರಿಗಳು ಹಾಗೂ ಈ ಭಾಗದ ಗಿರಿಜನರು ಪ್ರತಿಭಟಿಸಿದರು.
ಸರ್ಕಾರ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಆದಿವಾಸಿ ಪೋಡುಗಳಲ್ಲಿ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆಗಳನ್ನು ತೆರೆದು ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಬುಡಕಟ್ಟು ಸಮುದಾಯದ ಮಕ್ಕಳಿಗೆ ಪರಿಶಿಷ್ಟ ಪಂಗಡ ಉಪ ಯೋಜನೆಯಡಿ ಶೈಕ್ಷಣಿಕ ಅಭಿವೃದ್ಧಿಗಾಗಿ ಅನುದಾನವನ್ನು ಸಹ ನೀಡಲಾಗಿದೆ.
ಅದರೆ ಮಕ್ಕಳ ಶೈಕ್ಷಣಿಕ ಸಾಧನೆಗೆ ಅಡ್ಡಿ ಆತಂಕಗಳಿದ್ದು ಸಮಸ್ಯೆಯನ್ನು ಎದುರಿಸುವಂತಾಗಿದೆ. ಈತನ್ಮಧ್ಯೆ ಸರ್ಕಾರ ಈ ಬಗ್ಗೆ ಚಿಂತನೆ ನಡೆಸದೇ ಹಾಗೂ ಸಮುದಾಯದ ಜನತೆಯ ಅಭಿಪ್ರಾಯ ಪರಿಗಣಿಸದೇ ಏಕಾಏಕಿ ಬುಡಕಟ್ಟು ಆಶ್ರಮ ಶಾಲೆಗಳಿಗೆ ವಾಲ್ಮೀಕಿ ಆಶ್ರಮ ಶಾಲೆಗಳೆಂದು ಹೆಸರು ಬದಲಾಯಿಸಲು ತೀರ್ಮಾನಿಸಲಾಗಿದೆ.
ಇದರಿಂದ ಬುಡಕಟ್ಟು ಸಮುದಾಯದ ಸಂಸ್ಕೃತಿ, ಅಸ್ಥಿತ್ವ ಭಾಷೆ ಹಾಗೂ ಪಾರಂಪರಿಕ ಮೌಲ್ಯಗಳಿಗೆ ಧಕ್ಕೆ ತರುವಂತಹ ತೀರ್ಮಾನ ಇದಾಗಿದೆ. ಆದಿವಾಸಿ ಮಕ್ಕಳಿಗೆ ಬುಡಕಟ್ಟು ಆಶ್ರಮ ಶಾಲೆಗಳಲ್ಲಿ ಮೀಸಲಾಗಿದ್ದ ಸೌಕರ್ಯಗಳನ್ನು ಕಿತ್ತುಕೊಳ್ಳುವ ಹುನ್ನಾರ ಇದಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಚರ್ಚಿಸಿ ವಾಲ್ಮೀಕಿ ಆಶ್ರಮ ಶಾಲೆಗಳೆಂದು ಹೆಸರು ಬದಲಾಯಿಸುವ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬುಡಕಟ್ಟು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಮಾದೇವ, ತಾಲೂಕು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ರಂಗೇಗೌಡ, ಮುಖಂಡರಾದ ಬಸವಣ್ಣ, ಮಾದ, ಕೊಲ್ಲ, ಜಡೇಯ, ವೀರ, ನಂಜ, ಚೆಲುವ ಸೇರಿದಂತೆ ಆದಿವಾಸಿ ಸಮುದಾಯದ ಮುಖಂಡರು ಇನ್ನಿತರರು ಇದ್ದರು.



Post Comment