Loading Now

ಶಿಸ್ತಿನ ಬದುಕು .

‘ದೇವರು ಎಲ್ಲಾ ಮನುಷ್ಯರಲ್ಲಿ ಇದ್ದಾನೆ, ಆದರೆ ಎಲ್ಲಾ ಮನುಷ್ಯರು ದೇವರಲ್ಲಿಲ್ಲ. ಅದಕ್ಕಾಗಿಯೇ ನಾವು ಬಳಲುತ್ತೇವೆ.’
ಎಂದು ರಾಮಕೃಷ್ಣ ಪರಮಹಂಸರು ಹೇಳಿರುವರು. ಹಾಗಾದಲ್ಲಿ ನಮ್ಮ ಗಮನವನ್ನು ದೇವರೆಡೆ ಸಾಗಿಸಬೇಕು. ಜೀವನದಲ್ಲಿ ಒಮ್ಮೆಯಾದರೂ ಭಗವಂತನನ್ನು ಕಾಣಬೇಕು ಎನ್ನುವ ಅಭಿಲಾಷೆಯು ಬಂದೇ ಬರುತ್ತದೆ. ಆಧ್ಯಾತ್ಮಿಕತೆಯ ಹಾದಿಯಲ್ಲಂತೂ ಭಗವಂತನನ್ನು ತಲುಪುವುದೇ ನಮ್ಮ ಉದ್ದೇಶವಾಗಿಬಿಡುತ್ತದೆ. ಆದ್ದರಿಂದ ದೇವರನ್ನು ಸೇರಲು ಒಂದು ನಿರ್ಧಿರ್ಷ್ಟವಾದ ಮಾರ್ಗವೇನಾದರೂ ಇದೆಯೇ ಎನ್ನುವುದೇ ಪ್ರಶ್ನೆ…

“ಭಗವಂತನ ದಾರಿಯನ್ನು ತಲುಪಲು 5 ಮಾರ್ಗಗಳಿವೆ. . ರಾಜಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ ಹಾಗೂ ಹಠಯೋಗ. ‘ಹಠಯೋಗ ಪ್ರದೀಪಿಕಾ’ ಎನ್ನುವಂತಹ ಪುಸ್ತಕವು ಕೂಡ ಇದೆ. ಹಠಯೋಗದ ವಿಶೇಷತೆ ಬಹಳ ಮಹತ್ವದ್ದಾಗಿರುತ್ತದೆ. ಈ ಹಠಯೋಗಿಗಳು ಬಹಳ ವಿಶೇಷವಾದವರು. ಹಠಯೋಗವನ್ನು ಗುರುವಿನ ಸಾನ್ನಿಧ್ಯದಲ್ಲಿ ಕಲಿತವನು ಖಂಡಿತವಾಗಿಯೂ ಮುಕ್ತಿಯನ್ನು ಸಾಧಿಸುತ್ತಾನೆ. ಬಿಎಸ್ಕೆ ಅಯ್ಯಂಗಾರ್ ಎಂಬ ಪ್ರಖ್ಯಾತ ಯೋಗಪಟುವು ಅಷ್ಟಾಂಗ ಯೋಗವನ್ನು ಪರಿಚಯಿಸಿದರು. ಅಷ್ಟಾಂಗ ಯೋಗದ ಎಂಟು ಅವಯವಗಳು, ಪತಂಜಲಿ ಅವರ ಯೋಗ ಸೂತ್ರಗಳಲ್ಲಿ ತಿಳಿಸಿರುವಂತೆ ಶಾಸ್ತ್ರೀಯ ಯೋಗದ ವರ್ಗೀಕರಣವಾಗಿದೆ. ಈ ಮಾರ್ಗವು ನೈತಿಕವಾಗಿ ಶಿಸ್ತುಬದ್ಧ ಮತ್ತು ಉದ್ದೇಶಪೂರ್ವಕ ಜೀವನವನ್ನು ನೀಡುತ್ತದೆ. ಅವರು ಎಂಟು ಅಂಗಗಳನ್ನು ‘ಯಮ (ಇಂದ್ರಿಯನಿಗ್ರಹಗಳು), ನಿಯಮಾ (ಆಚರಣೆಗಳು), ಆಸನ (ಭಂಗಿಗಳು), ಪ್ರಾಣಾಯಾಮ (ಉಸಿರಾಟ), ಪ್ರತ್ಯಾಹಾರ (ಹಿಂತೆಗೆದುಕೊಳ್ಳುವಿಕೆ), ಧಾರಣ (ಏಕಾಗ್ರತೆ), ಧ್ಯಾನ ಮತ್ತು ಸಮಾಧಿ (ಹೀರಿಕೊಳ್ಳುವಿಕೆ) ಎಂದು ವ್ಯಾಖ್ಯಾನಿಸಿದ್ದಾರೆ. ಇಂದು ನಾನು ಯಮದ ವೈಶಿಷ್ಟ್ಯತೆಯನ್ನು ವಿವರಿಸುತ್ತೇನೆ. ಯಮ ಯಾವುದನ್ನು ಮಾಡಬಾರದೆಂದು ಹೇಳುತ್ತದೆ. ಯಮದಲ್ಲಿ ಐದು ವಿಭಾಗ – ಅಹಿಂಸಾ, ಸತ್ಯಂ, ಆಸ್ತೇಯಂ, ಬ್ರಹ್ಮಚರ್ಯ ಹಾಗೂ ಅಪರಿಗ್ರಹ. ಅಹಿಂಸೆ ಎಂದರೆ ಹಿಂಸೆಯನ್ನು ಮಾಡದೆ ಇರುವುದು. ಕಾಯಾ-ವಾಚಾ-ಮನಸಾ ಹಾಗೂ ಕರ್ಮಗಳಲ್ಲಿ ಯಾರನ್ನೂ ನೋಯಿಸಬಾರದು. ನೋವಾಗುವಂತೆ ವರ್ತಿಸಬಾರದು. ಶತ್ರುತ್ವವು ಹೊರಗಿಲ್ಲ,ನಮ್ಮಲ್ಲಿಯೇ ಇದೆ. ನೀವು ಬೇರೆಯವರ ಶತ್ರುತ್ವವನ್ನು ಒಪ್ಪಿಕೊಂಡ ಕ್ಷಣ, ಹಿಂಸೆ ಪ್ರಾರಂಭವಾಗುತ್ತದೆ. ನೀವು ಒಪ್ಪಿಕೊಳ್ಳುವವರೆಗೂ ಶತ್ರುತ್ವವು ಬೆಳೆಯುವುದಿಲ್ಲ. ನಮ್ಮ ಮನಸ್ಸಿನಲ್ಲೂ ಬೇರೆಯವರ ಬಗ್ಗೆ ಹೀನವಾಗಿ ಯೋಚಿಸಬಾರದು….ಮಾತನಾಡಬಾರದು. ಸತ್ಯಂ ಎಂದರೆ ಶಾಶ್ವತವಾದದ್ದು. ಯಾವುದು ನಶಿಸುವುದಿಲ್ಲವೋ ಅದೇ ಸತ್ಯ.ನಾವು ಎಂದಿಗೂ ಅಸತ್ಯವನ್ನು ನುಡಿಯಬಾರದು ಹಾಗೂ ಅಪ್ರಿಯವಾದ ಸತ್ಯವನ್ನು ಹೇಳಬಾರದು. ನಮ್ಮ ಸತ್ಯದಿಂದ ಬೇರೊಬ್ಬರಿಗೆ ಹಾನಿ ಉಂಟಾಗುವುದಾದರೆ ಮೌನವನ್ನು ಕಾಪಾಡಬೇಕು. ಅನಂತರ ಆಸ್ತೇಯಂ, ಎಂದರೆ ಸ್ವಾವಲಂಬಿಗಳಾಗಿರುವುದು, ಕದಿಯದೇ ಇರುವುದು. ನಾವು ಎಂದಿಗೂ ಬೇರೆಯವರ ಮೇಲೆ ಅವಲಂಬಿತರಾಗಿದ್ದೇವೆ. ಇಲ್ಲಿ ಕದಿಯದೇ ಇರುವುದು ಎಂದರೆ ಕೇವಲ ವಸ್ತುಗಳಿಗೆ ಸಂಬಂಧಪಟ್ಟಿರುವುದಿಲ್ಲ, ನಾವು ಬೇರೆಯವರ ಸಮಯವನ್ನೂ ಕದಿಯಬಾರದು. ನಮ್ಮ ಕೆಲಸವನ್ನು ನಾವೇ ಮಾಡಬೇಕು. ನಾಲ್ಕನೆಯ ವಿಭಾಗ ಬ್ರಹ್ಮಚರ್ಯ. ಎಂದರೆ ಲೈಂಗಿಕ ಸಂಯಮ. ಬ್ರಹ್ಮಚರ್ಯದಲ್ಲಿ 4 ವಿಧ- ಆಶ್ರಮಿಕ ಬ್ರಹ್ಮಚರ್ಯ(ಪ್ರೌಢಾವಸ್ಥೆಯ ಮೊದಲು), ವೃದ್ಧಿ ಬ್ರಹ್ಮಚರ್ಯ ( ಗೃಹಸ್ಥಾಶ್ರಮಿಗಳು), ನೈಷ್ಠಿಕ ಬ್ರಹ್ಮಚರ್ಯ(ಯೋಗಿಗಳು) ಹಾಗೂ ಯೌಗಿಕ ಬ್ರಹ್ಮಚರ್ಯ(ಅವಧೂತರು). ಕೊನೆಯದಾಗಿ ಅಪರಿಗ್ರಹವೆಂದರೆ ದುರಾಸೆ ಇಲ್ಲದಿರುವುದು. ನಮ್ಮದಲ್ಲದಿರುವ ವಸ್ತುವಿನ ಮೇಲೆ ಆಸೆಯನ್ನು ಪಡಬಾರದು. ನಿಮಗೆ ಶಾಂತಿಯುತವಾದ ಜೀವನ ಬೇಕಾದರೆ ಅಪರಿಗ್ರಹವನ್ನು ಬಿಡದೇ ಅನುಸರಿಸಿ.
ಇವೆಲ್ಲವನ್ನು ಪ್ರತಿಕ್ಷಣ ಪಾಲಿಸುವಂತೆ ಅಭ್ಯಾಸವನ್ನು ಮಾಡಿ. ಇದನ್ನು ಅನುಸರಿಸಿ ನಿಮ್ಮಲ್ಲಿ ಆಗಿರುವಂತಹ ಪ್ರತಿಯೊಂದು ಘಟನೆ ಹಾಗು ಪರಿವರ್ತನೆಯನ್ನು ಒಂದು ಪುಸ್ತಕದಲ್ಲಿ ಬರೆಯಲು ಪ್ರಾರಂಭಿಸಿ. ನನಗೆ ಸಾಬೀತುಪಡಿಸುವುದಕ್ಕಲ್ಲ ನಿಮಗೋಸ್ಕರವೇ ಇದನ್ನು ಪಾಲಿಸಿ. ನಿಮ್ಮನ್ನು ನೀವು ನಂಬಿ, ನಿಮ್ಮನ್ನು ನೀವು ಪ್ರೀತಿಸಿ, ನಿಮ್ಮನ್ನು ನೀವು ಗೌರವಿಸಿ.”

ಗುರುವಿಲ್ಲದೆ ಗುರಿ ಇದ್ದು ವ್ಯರ್ಥ. ನಮ್ಮ ಜೀವನದಲ್ಲಿ ನಾವೇ ಸೃಷ್ಟಿಸಿರುವ ಸರಿ-ತಪ್ಪುಗಳಲ್ಲಿ ನಾವೇ ಸಿಲುಕಿ ಶಾಂತತೆಯನ್ನು ಕಳೆದುಕೊಳ್ಳುತ್ತೇವೆ. ಆದ್ದರಿಂದಲೇ ಹೇಳುವುದೇನೆಂದರೆ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು. ನಾವೆಲ್ಲರೂ ಎಷ್ಟು ಅದೃಷ್ಟಶಾಲಿಗಳೆಂದರೆ, ಇಂತಹ ಕಾಲದಲ್ಲಿ, ನಮ್ಮ ನಡುವೆಯೇ ಇದ್ದು, ಶ್ರೀಗುರುಗಳು ನಮ್ಮನ್ನು ಶುದ್ಧೀಕರಿಸುತ್ತಿದ್ದಾರೆ. ಇಂತಹ ‘ಧ್ರುವತಾರೆ’ ಗೆ ಶತಕೋಟಿ ನಮನ.

  • ಸೌದಾಮಿನಿ

Post Comment

You May Have Missed