ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದವರಿಗೆಮನವೊಲಿಸಿ ಲಸಿಕೆ ಕೊಡಿಸಿದ ಡಿ.ಸಿ, ಸಿಇಓ
ಬೀದರ, ಅಕ್ಟೋಬರ್ 18 (ಕರ್ನಾಟಕ ವಾರ್ತೆ):-ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್‌ನಿಂದ ಅಕ್ಟೋಬರ್ 18ರಂದು ಬೀದರ ನಗರದಲ್ಲಿ ಕೋವಿಡ್-19 ಲಸೀಕಾರಣಕ್ಕೆ ಸಂಬಂಧಿಸಿದಂತೆ ವಿಶೇಷ ಕಾರ್ಯಾಚರಣೆ ನಡೆಯಿತು.
ಬೀದರ ನಗರಸಭೆಯ ವಾರ್ಡ ನಂಬರ್ 33ರಲ್ಲಿ ಬರುವ ಅಬ್ದುಲ್ ಪೈಜ್ ದರ್ಗಾ ಸುತ್ತಲಿನ ಪ್ರದೇಶಗಳಲ್ಲಿನ ಕೆಲವರು ಕೋವಿಡ್-19 ಲಸಿಕೆಯನ್ನು ಪಡೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಹೀರಾ ನಸೀಮ್ ಅವರು ಖುದ್ದು ಆ ಪ್ರದೇಶಕ್ಕೆ ತೆರಳಿ ಅಲ್ಲಿನ ಸಾರ್ವಜನಿಕರ ಮನವೊಲಿಸಿ ಕೋವಿಡ್ ಲಸಿಕೆಯನ್ನು ಕೊಡಿಸಿದರು.
ಕೋವಿಡ್-19 ಲಸಿಕೆಯ ಬಗ್ಗೆ ಯಾವುದೇ ರೀತಿಯ ಭಯ ಬೇಡ. ಇದು ಜೀವರಕ್ಷಕ ಲಸಿಕೆಯಾಗಿದೆ. ಇದರಿಂದ ಯಾವುದೇ ರೀತಿಯ ತೋಂದರೆಗಳು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಓ ಅವರು ಜನರಲ್ಲಿ ಮನವರಿಕೆ ಮಾಡಿದಾಗ ಅಲ್ಲಿನ ಸಾರ್ವಜನಿಕರು ಒಬ್ಬೊಬ್ಬರಾಗಿ ಲಸಿಕೆಯನ್ನು ಪಡೆದುಕೊಂಡರು.
ಸಾರ್ವಜನಿಕರಲ್ಲಿ ಜಿಲ್ಲಾಧಿಕಾರಿಗಳ ಮನವಿ: ಕೋವಿಡ್-19 ಲಸಿಕೆಯ ಬಗ್ಗೆ ಸಾರ್ವಜನಿಕರು ಯಾವುದೇ ಭೀತಿಗೊಳಪಡಬಾರದು. ಕೆಲವರು ವಾಟ್ಸಫ್, ಫೇಸ್‌ಬುಕ್ ಮೂಲಕ ಹರಿಬಿಡುವ ಸುಳ್ಳು ಮಾಹಿತಿಯ ಬಗ್ಗೆ ಜನರು ಗಮನ ಕೊಡಬಾರದು. ನಿಮ್ಮ ಸರ್ಕಾರ, ನಿಮ್ಮ ಸರ್ಕಾರಿ ನೌಕರರು ಹೇಳುವ ಮಾಹಿತಿಯನ್ನು ಸಾರ್ವಜನಿಕರು ಕೇಳಬೇಕು. ದೇಶದಲ್ಲಿ ಈಗಾಗಲೇ 99 ಕೋಟಿ ಜನರು ಕೋವಿಡ್ ಲಸಿಕೆಯನ್ನು ಹಾಕಿಸಿಕೊಂಡಿದ್ದಾರೆ. ಈ ಲಸಿಕೆಯಿಂದ ಯಾರ ಪ್ರಾಣಕ್ಕೂ ತೊಂದರೆಯಾಗಿಲ್ಲ. ಅಕ್ಟೋಬರ್‌ನಲ್ಲಿ ಮೂರನೇ ಅಲೆ ಬರುವ ಸಂಭವವಿತ್ತಾದರೂ ಅದು ಇನ್ನು ಬಂದಿಲ್ಲ. ಜಿಲ್ಲೆಯಲ್ಲಿ ಇನ್ನೂ ಕೆಲವರು ಲಸಿಕೆ ಪಡೆಯುವುದು ಬಾಕಿ ಇದೆ. ಅವರು ಲಸಿಕೆ ಪಡೆಯದಿದ್ದರೆ ಕೋವಿಡ್ ವೈರಾಣು ಅವರಿಗೆ ತಗುಲಿ ಅವರಿಂದ ಇತರರಿಗೂ ಹರಡುವ ಸಾಧ್ಯತೆ ಇರುತ್ತದೆ. ಇದನ್ನು ಸಾರ್ವಜನಿಕರು ಅರಿಯಬೇಕು. ನಾವು ನಿಮ್ಮ ಮನೆಬಾಗಿಲಿಗೆ ಬರುತ್ತಿದ್ದೇವೆ. ಸಾರ್ವಜನಿಕರು ಲಸಿಕೆಯನ್ನು ಪಡೆಯಬೇಕು. ಸುರಕ್ಷಿತವಾಗಿರಬೇಕು. ಜೀವನವಿದ್ದರಷ್ಟೇ ಎಲ್ಲವನ್ನು ನಾವು ಮಾಡಲಿಕ್ಕೆ ಸಾಧ್ಯವಿದೆ. ಜೀವನವೇ ಇಲ್ಲವೆಂದರೆ ಏನನ್ನೂ ಮಾಡಲಾಗದು. ಕೋವಿಡ್-19 ಸುರಕ್ಷಿತ ಲಸಿಕೆಯಾಗಿದೆ. ಬೀದರ ಜಿಲ್ಲೆಯಲ್ಲಿರುವ ಎಲ್ಲ ಸಾರ್ವಜನಿಕರು ತಪ್ಪದೇ ಲಸಿಕೆಯನ್ನು ಪಡೆದುಕೊಳ್ಳಬೇಕು ಎಂದು ಇದೆ ವೇಳೆ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಸುದ್ದಿಗಾರರ ಮೂಲಕ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಸಿಇಓ ಮನವಿ: ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ಕೆಲವರು ತೀರಿಕೊಂಡಿದ್ದನ್ನು ನಾವು ನೋಡಿದ್ದೇವೆ. ಈ ರೀತಿಯ ದುಸ್ಥಿತಿಯು ಮತ್ತೆ ಮರುಕಳಿಸಬಾರದು. ಇದಕ್ಕೆ ಒಂದೇ ಒಂದು ಪರಿಹಾರ ಮಾರ್ಗವೆಂದರೆ ಅದು ಪ್ರತಿಯೊಬ್ಬರು ಲಸಿಕೆಯನ್ನು ಪಡೆದುಕೊಳ್ಳುವುದಾಗಿದೆ. ಮೊದಲನೇ ಡೋಸ್ ಪಡೆದುಕೊಂಡು ಎರಡನೇ ಡೋಸ್ ಪಡೆಯದೇ ಇರುವ ಪ್ರತಿಯೊಬ್ಬರು ಇನ್ನು ವಿಳಂಬ ಮಾಡದೇ ಎರಡನೇ ಡೋಸನ್ನು ಪಡೆದುಕೊಳ್ಳಬೇಕು. ಜನರು ಲಸಿಕೆಯನ್ನು ಹಾಕಿಸಿಕೊಳ್ಳಲು ಮುಂದೆ ಬರಬೇಕು ಎಂದು ಇದೆ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಜಹೀರಾ ನಸೀಮ್ ಅವರು ಮನವಿ ಮಾಡಿದರು.
ಹಜ್ ಕಮೀಟಿಯ ಅಧ್ಯಕ್ಷರ ಮನವಿ: ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಹಜ್ ಸಮಿತಿಯ ಅಧ್ಯಕ್ಷರಾದ ರವೂಫುದ್ದೀನ್ ಕಚೇರಿವಾಲೆ ಅವರು ಮಾತನಾಡಿ, ಬೀದರ ಜಿಲ್ಲೆಯ ಪ್ರತಿಯೊಬ್ಬರು ಲಸಿಕೆಯನ್ನು ಪಡೆದುಕೊಳ್ಳಬೇಕು. ಮೊದಲನೇ ಡೋಸ್ ಪಡೆದುಕೊಂಡವರು ಎರಡನೇ ಡೋಸ್‌ನ್ನು ಕೂಡ ತಪ್ಪದೇ ಪಡೆದುಕೊಳ್ಳಬೇಕು. ಲಸಿಕೆಯನ್ನು ಪಡೆಯುವುದರ ಬಗ್ಗೆ ಯಾರೂ ಕೂಡ ಭಯಪಡಬಾರದು. ಈ ಲಸಿಕೆಯಿಂದ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು. ಮನೆಮನೆಗೆ ತೆರಳಿ ಲಸಿಕೆ ನೀಡುತ್ತಿರುವ ಬೀದರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಆರೋಗ್ಯ ಇಲಾಖೆಗೆ ಅಭಿನಂದನೆಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ರವೀಂದ್ರಕುಮಾರ ಅಂಗಡಿ, ಡಿಎಚ್‌ಓ ಡಾ.ವಿ.ಜಿ.ರೆಡ್ಡಿ, ಓಲ್ಡ್ ಸಿಟಿಯಲ್ಲಿರುವ 100 ಹಾಸಿಗೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವ್ಶೆದ್ಯಾಧಿಕಾರಿಗಳಾದ ಡಾ.ಸೋಹೆಲ್, ಜಿಲ್ಲಾಧಿಕಾರಿಗಳ ಕಚೇರಿಯ ಸತೀಶ ವಾಲೆ ಹಾಗೂ ಇತರರು ಇದ್ದರು.

Post Comment