ರಾಜರ ಆಳ್ವಿಕೆ ಕಾಲದಲ್ಲಿ ಹಲವು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕರುನಾಡು ಮೈಸೂರು ರಾಜ್ಯವಾಗಿತ್ತು, ಏಕೀಕರಣಗೊಂಡ ನಂತರ ಕರ್ನಾಟಕ ರಾಜ್ಯವಾಗಿ ಉದಯವಾಯಿತು:ಎನ್.ಕೆ.ಎಫ್ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಎನ್.ಕೆ.ಫರೀದ್
ತಿ.ನರಸೀಪುರ ನ.03:- ರಾಜರ ಆಳ್ವಿಕೆ ಕಾಲದಲ್ಲಿ ಹಲವು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ಕರುನಾಡು ಮೈಸೂರು ರಾಜ್ಯವಾಗಿತ್ತು, ಏಕೀಕರಣಗೊಂಡ ನಂತರ ಕರ್ನಾಟಕ ರಾಜ್ಯವಾಗಿ ಉದಯವಾಯಿತು ಎಂದು ಎನ್.ಕೆ.ಎಫ್ ಫೌಂಡೇಶನ್ ಟ್ರಸ್ಟ್ ನ ಅಧ್ಯಕ್ಷ ಎನ್.ಕೆ.ಫರೀದ್ ಹೇಳಿದರು.
ಪಟ್ಟಣದ ಎನ್.ಕೆ.ಎಫ್ ಪಬ್ಲಿಕ್ ಶಾಲೆಯಲ್ಲಿ ಸೋಮವಾರ ನಡೆದ 66 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಐದು ನೂರ ಇಪ್ಪತ್ತೈದಕ್ಕೂ ಹೆಚ್ಚು ರಾಜರುಗಳ ಸಂಸ್ಥಾನದಲ್ಲಿ ಹಂಚಿಹೋಗಿದ್ದ ಭರತ ಕಂಡ ಸ್ವಾತಂತ್ರ್ಯ ನಂತರ ಭಾರತ ದೇಶವಾದರೆ, ಹಲವು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದ ರಾಜ್ಯ ಏಕೀಕರಣದಿಂದಾಗಿ ಸುಂದರ ಕರ್ನಾಟಕ ರಾಜ್ಯವಾಗಿ ರೂಪುಗೊಂಡಿತು ಎಂದರು.
ನಾಡಿನಲ್ಲಿ ವಾಸವಿರುವ ವ್ಯಕ್ತಿ ಯಾವುದೇ ಧರ್ಮೀಯನಾಗಿರಲಿ, ಯಾವ ಭಾಷೆಯ ಸಮುದಾಯದವನಾಗಿರಲಿ ನೆಲದ ಭಾಷೆಯನ್ನು ತಾಯಿಯಂತೆ ಗೌರವಿಸಿ, ಕನ್ನಡವನ್ನು ಕಡ್ಡಾಯವಾಗಿ ಕಲಿತು ಮಾತನಾಡಬೇಕು. ನಾಡು-ನುಡಿಯ ಮಹತ್ವವನ್ನು ನೆನಪಿಸಿ, ಗೌರವಿಸು ಎಂಬುದನ್ನು ತಿಳಿಸಲಿಕ್ಕೆ ರಾಜ್ಯದಾದ್ಯಂತ ಪ್ರತಿವರ್ಷವೂ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ನಾಡು ನುಡಿಯನ್ನು ಗೌರವಿಸಿ ಬಳಸಬೇಕು ಎಂದು ಎನ್.ಕೆ.ಫರೀದ್ ಕರೆ ನೀಡಿದರು.
ಸನ್ಮಾನವನ್ನು ಸ್ವೀಕರಿಸಿದ ಪುರಸಭೆಯ ನೂತನ ಅಧ್ಯಕ್ಷ ಎಸ್.ಮದನ್ ರಾಜ್ ಮಾತನಾಡಿ, ಸರಳವಾಗಿರುವ ಕನ್ನಡ ಭಾಷೆಯನ್ನು ಪ್ರತಿಯೊಬ್ಬರು ಸುಲಭವಾಗಿ ಕಲಿಯಬಹುದು. ಇಂತಹ ಮಾತೃಭಾಷೆ ಹಬ್ಬಕ್ಕೆ ಪ್ರತಿಯೊಬ್ಬ ಕನ್ನಡಿಗರು ಅಭಿಮಾನವನ್ನು ಇಟ್ಟುಕೊಂಡು ಬೇರೆ ಭಾಷಿಕರು ಕೂಡ ಕನ್ನಡ ಕಲಿಯುವಂತೆ ಸ್ಪೂರ್ತಿಯನ್ನು ತುಂಬಬೇಕು ಎಂದು ಸಲಹೆ ನೀಡಿದರು.
ಮದನ್ ರಾಜ್ ಸೇರಿದಂತೆ ಮಾಜಿ ಅಧ್ಯಕ್ಷ ಎನ್.ಸೋಮಣ್ಣ, ಸದಸ್ಯ ಅಹಮ್ಮದ್ ಸೈಯದ್, ಮುಖಂಡರಾದ ಹೆಚ್. ಆರೀಫ್, ನೂರುಲ್ಲಾ ಶರೀಫ್, ಅಮ್ಜದ್ ಖಾನ್ ಹಾಗೂ ಇನ್ನಿತರ ಗಣ್ಯರನ್ನು ಸನ್ಮಾನಿಸಲಾಯಿತು. ಶಾಲೆಯ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿಯ ಗೀತೆಗಳಿಗೆ ನರ್ತಿಸಿ ಮನೋರಂಜನೆ ನೀಡಿದರು.
ಎನ್.ಕೆ.ಎಫ್ ಫೌಂಡೇಶನ್ ಟ್ರಸ್ಟ್ ನ ಕಾರ್ಯದರ್ಶಿ ಜೋಹರಾ ಸುಲ್ತಾನ, ನಿರ್ದೇಶಕರಾದ ಆಫ್ರೀನ್, ಇಮ್ರಾನ್ ಅಹಮದ್, ಮುಖಂಡ ರಾಜಣ್ಣ,ಆರೀಫ್, ಮುಖ್ಯ ಶಿಕ್ಷಕಿ ಹೇಮ, ಶಿಕ್ಷಕರಾದ ಅಶ್ವಿನಿ, ಗೀತಾ, ಅನಿತಾ, ರೇಖಾ, ಶಾಲಿನಿ, ವಿಜಯಲಕ್ಷ್ಮಿ, ಶೈಲಾ, ಹಾಜಿರಾ, ಆಶಾ, ಸ್ವರ್ಣಲತಾ, ಶಿಲ್ಪಶ್ರೀ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.



Post Comment