ಯಾವುದು ಸತ್ಯ? ಯಾವುದು ನಿತ್ಯ?
“ಮನೋ ಮಾತ್ರಾ ಜಗತ್, ಮನೋ ಕಲ್ಪಿತಃ ಜಗತ್”
ಎಂದಂತೆ ಎಲ್ಲವೂ ಮನಸ್ಸಿನಿಂದ ಕಲ್ಪಿತವಾಗಿದೆ. “ಎಲ್ಲವೂ ಭ್ರಮೆಯೇ” ಎಂದು ತಿಳಿದರೂ, ನಾವು ಮೂರ್ತಿಪೂಜೆಯನ್ನು ಮಾಡುತ್ತೇವೆ, ದ್ವಂದ್ವ ಭಾವದಿಂದ ನೋಡುತ್ತೇವೆ, ಹೋಮ ಹವನಾದಿಗಳನ್ನು ಮಾಡುತ್ತೇವೆ… ಇದೆಲ್ಲ ಅಗತ್ಯವೇ?
“ನೀರಿನ ಅಸ್ತಿತ್ವವನ್ನು ನೀವು ನಂಬುತ್ತೀರಾ? ನೀವು ನೀರನ್ನು ನೋಡಲು ಸಾಧ್ಯವಾಗುತ್ತದೆಯೇ? ನಿಮ್ಮ ಉತ್ತರ ಹೌದು ಎಂದಲ್ಲವೇ?….. ಆದರೆ ಅದು ಆವಿಯ ರೂಪದಲ್ಲಿದ್ದಾಗ ನೋಡಲಾಗುವುದಿಲ್ಲ. ನೀರು ಇರುತ್ತದೆ, ಆದರೆ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಇಲ್ಲಿ ನಾವು ತಿಳಿಯಬೇಕಾಗಿರುವುದೇನೆಂದರೆ, ನಮ್ಮ ಯೋಚನೆಗಳೇ ಭ್ರಮೆ….ನಮ್ಮ ಯೋಚನೆಗಳೇ ಮಾಯೆ….
ನಿಮ್ಮೆಲ್ಲರಿಗೂ ಓದುವುದು ಮತ್ತು ಬರೆಯುವುದು ತಿಳಿದಿದೆ ಅಲ್ಲವೇ… ಏಕೆಂದರೆ ಅದನ್ನು ನಿಮಗೆ ಕಲಿಸಲಾಗಿತ್ತು. ಆದರೆ ನೀವು ಒಂದು ಮಗುವಿಗೆ ಬರೆಯಲು, ಓದಲು ಕಲಿಸದಿದ್ದರೆ, ಆ ಮಗುವು ಈ ಜಗತ್ತಿನಲ್ಲಿ ಬದುಕುವುದು ಕಷ್ಟ. ಅಕ್ಷರಗಳು ಮಾಯೆಯೇ, ಆದರೆ ಆ ಮಾಯೆಯು ಜೀವನವನ್ನು ನಡೆಸಲು ಬೇಕೇಬೇಕು. ಆದ್ದರಿಂದ ಮಾಯೆಗೆ ಶಕ್ತಿ ಇರುವುದು ಹೌದು. ಅದೂ ಕೂಡ ಬ್ರಹ್ಮ ತತ್ವವೇ. ಆದರೆ ಮಾಯೆಯು ನಮ್ಮ ಮೇಲೆ ಪ್ರಭಾವ ಬೀರಬಾರದು. ನಾವು ಅದರ ಮೇಲೆ ನಿಯಂತ್ರಣ ಹೊಂದಿರಬೇಕು. ಮಾಯೆಯು ಯೋಗಿಗಳ ಸುತ್ತವೂ ಇರುತ್ತದೆ, ಆದರೆ ಅವರು ಪ್ರಭಾವಿತರಾಗುವುದಿಲ್ಲ. ಸಣ್ಣ ಬ್ರೇಕ್ ಪ್ಯಾಡ್ ದೊಡ್ಡ ಲಾರಿಯನ್ನು ಹೇಗೆ ನಿಯಂತ್ರಿಸಬಹುದು, ಅದೇ ರೀತಿ ಯೋಗಿಯು ತಮ್ಮ ಸಣ್ಣ ತಂತ್ರದಿಂದ ಬ್ರಹ್ಮಾಂಡವನ್ನೇ ನಿಯಂತ್ರಿಸಬಹುದು.
ನಮ್ಮ ಯೋಚನೆಗಳೆಲ್ಲಾ ಭ್ರಮೆಯೇ. ನಾವು ಸಂತಸ, ದುಃಖ ಅಥವಾ ಖಿನ್ನತೆಗೆ ಏಕೆ ಒಳಗಾಗುತ್ತೇವೆ? ಅದಕ್ಕೆ ಕಾರಣ ನಮ್ಮ ಜೀವನಶೈಲಿ.
ಒಮ್ಮೆ ಒಬ್ಬ ಸನ್ಯಾಸಿ ಪ್ರಯಾಣಿಸುತ್ತಿದ್ದಾಗ, ದಾರಿಯಲ್ಲಿ, ಒಂದು ಸಣ್ಣ ಗುಡಿಸಲಿನಲ್ಲಿ ವಿಶ್ರಾಂತಿ ಪಡೆಯಲು ನಿರ್ಧರಿಸುತ್ತಾರೆ. ಅಲ್ಲಿ ನಾಲ್ಕು ಜನರ ಬ್ರಾಹ್ಮಣ ಕುಟುಂಬ, ತಂದೆ, ತಾಯಿ, ಮಗ ಮತ್ತು ಅವನ ಹೆಂಡತಿ ವಾಸಿಸುತ್ತಿರುತ್ತಾರೆ. ಅಲ್ಲಿದ್ದ ಮಗ, ಸನ್ಯಾಸಿಯನ್ನು ತಮ್ಮ ಗುಡಿಸಲಿನಲ್ಲಿ ಇರಲು ಹೇಳುತ್ತಾನೆ. ಮಗ ಮತ್ತು ಅವನ ತಂದೆ ಆ ಸನ್ಯಾಸಿಯೊಂದಿಗೆ ಬಾಂಧವ್ಯವನ್ನು ಅನುಭವಿಸುತ್ತಾರೆ. ಆದರೆ ಹೆಂಡತಿ ಮತ್ತು ಅವನ ತಾಯಿ, ಸನ್ಯಾಸಿಯ ಜೀವನಶೈಲಿಯ ಬಗ್ಗೆ ಚಿಂತಿತರಾಗಿರುತ್ತಾರೆ. ಆ ಸನ್ಯಾಸಿಯು ಯಾರೊಂದಿಗೂ ಬಾಂಧವ್ಯವನ್ನು ಬೆಳೆಸುತ್ತಿರಲಿಲ್ಲ, ಎಲ್ಲರನ್ನು ತ್ಯಜಿಸಿ ಹೋಗುತ್ತಿದ್ದರು, ಆದರೆ ಆ ಮಗನು, ತನ್ನೊಂದಿಗೆ ವಿಶೇಷವಾದ ಸಂಪರ್ಕವೊಂದನ್ನು ಹೊಂದುತ್ತಿದ್ದಾನೆಂದು ತಿಳಿದು ಸುಮಾರು ದಿನಗಳು ಅಲ್ಲಿಯೇ ಇದ್ದರು. ಗಂಡನು, ತನ್ನ ಮಗನನ್ನು, ಆ ಸನ್ಯಾಸಿಯೊಂದಿಗೆ ಸಮಯ ಕಳೆಯಲು ಏಕೆ ಬಿಟ್ಟಿದ್ದಾನೆಂದು ಅಮ್ಮನಿಗೆ ಚಿಂತೆ. ಮಗನು ಎಲ್ಲವನ್ನೂ ಮರೆತು ಆ ಸನ್ಯಾಸಿಯಲ್ಲಿ ವಿಲೀನವಾಗಿದ್ದನು. ಅದರಿಂದ ಅವನು ಆನಂದದಲ್ಲಿದ್ದನು. ಆದರೆ ತಾಯಿ ಮತ್ತು ಹೆಂಡತಿ, ಅವನು ಸನ್ಯಾಸಿಯೊಂದಿಗೆ ಹೋಗಬಹುದು ಎಂಬ ದುಃಖದ ಚಿಂತೆಯಲ್ಲೇ ಇದ್ದರು.
ಗುರು ಅಥವಾ ಸನ್ಯಾಸಿಯು ಸಂಪೂರ್ಣತೆಯ ಸಾರಾಂಶ. ಗುರು ಎಲ್ಲಿಗೆ ಹೋದರೂ, ಅಲ್ಲಿ ಎಲ್ಲವೂ ತುಂಬಿ ಬರುತ್ತದೆ. ಆದರೆ ತಾಯಿ ಮತ್ತು ಹೆಂಡತಿ ದುಃಖದಲ್ಲಿಯೇ ಇದ್ದರು. ಗುರುಗಳು ಎಲ್ಲರಿಗೂ ಅವಕಾಶವನ್ನು ನೀಡಿದರು, ಆದರೆ ಸಂತೋಷವೋ ದುಃಖವೋ ಎನ್ನುವುದು ಮನಸ್ಸಿನ ನಿರ್ಣಯವಾಗಿತ್ತು. ಮನಸ್ಸಿನ ಆಲೋಚನೆಗಳೇ ಭ್ರಮೆ
ಅನುಭವಿಸುವವನಿಗೆ ಭ್ರಮೆಯೂ ಸತ್ಯವೇ. ನೀವು ಇದ್ದಕ್ಕಿದ್ದಂತೆ ಹಗ್ಗವನ್ನು ನೋಡಿ ಹಾವೆಂದು ಭಾವಿಸಿ ಭಯಗೊಂಡರೆ, ಆ ಆಲೋಚನೆ ಭ್ರಮೆಯಾಗಿರಬಹುದು, ಆದರೆ ನೀವು ಅನುಭವಿಸಿದ ಭಯವು ಸತ್ಯವೇ. ಆದ್ದರಿಂದ ಆಲೋಚನೆಯು ಭ್ರಮೆ ಮತ್ತು ಅನುಭವವು ವಾಸ್ತವ. ಅನುಭವವೇ ದೇವರು. ಅನುಭವ ಅಥವಾ ದೇವರನ್ನು ವರ್ಣಿಸಲು ಸಾಧ್ಯವಾಗುವುದಿಲ್ಲ ಏಕೆಂದರೆ ಪದಗಳು ಮಾನವನ ಸೃಷ್ಟಿ, ಮಾನವ ದೇವನ ಸೃಷ್ಟಿ. ಮಾನವನನ್ನು ಸೃಷ್ಟಿಸಿರುವವನನ್ನು, ಮಾನವನ ಸೃಷ್ಟಿಯಾದ ಪದಗಳಿಂದ ಹೇಗೆ ವರ್ಣಿಸುವುದು? ಕೇವಲ ಅನುಭವಿಸಬಹುದು.”
ಹೌದೇ ಹೌದು! ಶ್ರೀ ಗುರುಗಳನ್ನು ವರ್ಣಿಸಲು ಸೃಷ್ಟಿಕರ್ತನೇ ಪದಗಳನ್ನು ಪೋಣಿಸಬೇಕು. ಆಕಾಶದಷ್ಟೇ ದೈತ್ಯವಾದ ನಮ್ಮ ಭ್ರಮೆಯಲ್ಲಿ, ಸಹಸ್ರ ಯೋಜನೆಗಳಿಗೂ ಬೆಳಕ ಸಾರಿ ಮಿನುಗುತ್ತಿರುವ ‘ಧ್ರುವತಾರೆ’ಗೆ ನಮನ.
ಸೌಧಾಮಿನಿ

Post Comment