ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನಕ್ಕೆ ಕೊಡಗಿನಲ್ಲಿ ಕಲ್ಲು, ಮೊಟ್ಟೆ, ಕರಪತ್ರಗಳನ್ನು ಎಸೆದಿರುವುದು ಖಂಡನಿಯ ಎಂದು ಶಾಸಕ ಆರ್. ನರೇಂದ್ರ ಕಿಡಿಕಾರಿದ್ದಾರೆ.
ಹನೂರು ಅ 19 : ರಾಜ್ಯದ ಮುಖ್ಯಮಂತ್ರಿ ಅಷ್ಟೇ ಸ್ಥಾನಮಾನವನ್ನು ಹೊಂದಿರುವ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಾಹನಕ್ಕೆ ಕೊಡಗಿನಲ್ಲಿ ಬಿಜೆಪಿ, ಆರ್. ಎಸ್. ಎಸ್. ಭಜರಂಗ ದಳದವರು ಕಲ್ಲು, ಮೊಟ್ಟೆ, ಕರಪತ್ರಗಳನ್ನು ಎಸೆದಿರುವುದು ಖಂಡನಿಯ ಎಂದು ಶಾಸಕ ಆರ್. ನರೇಂದ್ರ ಕಿಡಿಕಾರಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾತನಾಡುವ ವಾಕ್ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಒಬ್ಬರ ಹೇಳಿಕೆ ಇಷ್ಟವಿಲ್ಲದಿದ್ದರೆ, ಅದಕ್ಕೆ ಪ್ರತಿ ಉತ್ತರ ನೀಡಬಹುದು. ಆದರೆ ವಿರೋಧ ಪಕ್ಷದ ನಾಯಕರ ಮೇಲೆ ಹಲ್ಲೆಗೆ ಮುಂದಾಗಿರುವುದು ಪ್ರಭಾ ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿದಂತಾಗುತ್ತದೆ. ಸಿದ್ದರಾಮಯ್ಯ ಅವರ ಜನ್ಮದಿನಾಚರಣೆ ಅಮೃತ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಾಗವಹಿಸಿದ್ದು, ಹಾಗೂ ಮೊನ್ನೆ ಬೆಂಗಳೂರಿನಲ್ಲಿ ಕರೆ ನೀಡಲಾಗಿದ್ದ ಕಾಂಗ್ರಸ್ ಕಾರ್ಯಕರ್ತರ ಸಭೆಗೆ ಮೂರು ಲಕ್ಷಕ್ಕೂ ಹೆಚ್ಚು ಜನ ಆಗಮಿಸಿರುವುದನ್ನು ಕಂಡು ಪಕ್ಷ ಹಾಗೂ ಸಿದ್ದರಾಮಯ್ಯ ಅವರ ಜನಪ್ರಿಯತೆಯನ್ನು ಕುಗ್ಗಿಸುವುದು ಇದಾಗಿದೆ. ಮುಖ್ಯವಾಗಿ ಕೊಡಗಿನಲ್ಲಿ ಅತಿವೃಷ್ಟಿಯಿಂದ ಒಳಗಾದ ಜನತೆಗೆ ವಸತಿ, ಗಂಜಿಕೇಂದ್ರ, ಹಾಗೂ ಮೂಲಭೂತ ಪುನರ್ವಸತಿಗಳನ್ನು ಕಲ್ಪಿಸುವ ದಿಸೆಯಲ್ಲಿ ವಿಫಲವಾಗಿರುವುದನ್ನು ಮುಚ್ಚಿಕೊಳ್ಳಲು ಅಲ್ಲಿನ ಶಾಸಕರುಗಳು ಇಂತಹ ದುಷ್ಕೃತ್ಯಕ್ಕೆ ಮುಂದಾಗಿದ್ದಾರೆ. ಇಂತಹ ವೈಫಲ್ಯವನ್ನು ಸಿದ್ದರಾಮಯ್ಯ ಅವರು ರಾಜ್ಯದ ಜನತೆ ಮುಂದೆ ಹಾಗೂ ವಿಧಾನಸೌಧದಲ್ಲಿ ಧ್ವನಿ ಎತ್ತುವುದರಿಂದ ಬಿಜೆಪಿ ಪಕ್ಷಕ್ಕೆ ಹಿನ್ನಡೆ ಆಗುತ್ತದೆ ಎಂದು ಈ ಗಲಾಟೆಯನ್ನು ಸೃಷ್ಟಿಸಿದ್ದಾರೆ. ಪ್ರಮುಖವಾಗಿ ಜಿಲ್ಲಾಧಿಕಾರಿ ಕಟ್ಟಡದ ಬಳಿ ಈ ಪ್ರತಿಭಟನೆ ನಡೆದಿದ್ದು, ಅಲ್ಲಿನ ಲೋಪವನ್ನು ಮುಚ್ಚಿಹಾಕುವ ಉದ್ದೇಶ ಇದರಲ್ಲಿ ಅಡಗಿದೆ. ಯಾರು ಈ ಘಟನೆಯಲ್ಲಿ ಭಾಗವಹಿಸಿ ಅಶಾಂತಿ ಉಂಟು ಮಾಡಿದ್ದಾರೆ ಅವರ ವಿರುದ್ಧ ಕಾನೂನಿನ ಕ್ರಮ ಕೈಗೊಂಡು ಶಿಕ್ಷೆ ವಿಧಿಸಬೇಕು. ಇಂತಹ ಘಟನೆ ಮುಂದೆ ಮರುಕಳಿಸಬಾರದು. ಈ ಕೃತ್ಯವನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಹಾಗೂ ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖಂಡಿಸಿದ್ದಾರೆ. ಆದರೆ ಅಲ್ಲಿನ ಶಾಸಕರುಗಳು ಬೇಜವಾಬ್ದಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಆ.25 ರಂದು ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಗಿದೆ. ಇದೆ ದಿನ 75 ನೇ ಸ್ವಾತಂತ್ರ್ಯೋತ್ಸವ ನಡಿಗೆಯನ್ನು ದೊಡ್ಡಿಂದುವಾಡಿ ಗ್ರಾಮದಿಂದ ಹನೂರು ಪಟ್ಟಣದವರಿಗೆ ಕೈಗೊಳ್ಳಲಾಗಿದೆ. ಈ ಎರಡು ಕಾರ್ಯಕ್ರಮಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮಾಧ್ಯಮಗಳ ಮೂಲಕ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಉಪಾಧ್ಯಕ್ಷ ಬಸವರಾಜು, ಹನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜು, ಮಧುವನಹಳ್ಳಿ ಶಿವಕುಮಾರ್,ಮಹದೇವಪ್ರಸಾದ್, ಜಿಲ್ಲಾ ಎಸ್ಸಿ ಘಟಕದ ನಾಗರಾಜು, ತಾ. ಪಂ. ಮಾಜಿ ಸದಸ್ಯ ಜವಾದ್ ಅಹಮದ್, ಪ.ಪಂ. ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಹರೀಶ್ ಕುಮಾರ್, ಸೋಮಶೇಖರ್, ಸಂಪತ್ ಕುಮಾರ್, ಮುಖಂಡರುಗಳಾದ ಪಾಳ್ಯ ಕೃಷ್ಣ, ಪೆದ್ದನಪಾಳ್ಯ ಮಣಿ, ಹುತ್ತೂರು ಪುಟ್ಟ ವೀರನಾಯಕ, ಯೂತ್ ಕಾಂಗ್ರೆಸ್ ಗುಂಡಾಪುರ ಮಾದೇಶ್ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು.


Post Comment