Loading Now

ಮಗಳ ಮದುವೆ !

ಎಷ್ಟು ಸಂಭ್ರಮ ಎಷ್ಟು ಸಂತಸ ಕೆಲಸವೋ ಕೆಲಸ ಎಲ್ಲದರಲ್ಲೂ ಉಲ್ಲಾಸ ಅದುವೆ ಮದುವೆ ಮನೆಯ ಲಕ್ಷಣ.ಮಲ್ಲಿಗೆ ಹೂವಿನ ಘಮಘಮ ಪರಿಮಳ.ನಗುವ ಕೀಟಲೆ ಮಾಡುವ ಗೆಳತಿಯರು . ಅದೆಲ್ಲಿ ಇದೆಲ್ಲಿ ಎಂದು ತಯಾರಿಯಲ್ಲಿ ನಿರತರಾದ ಅತ್ತೆ, ಆಜ್ಜಿ, ಅಕ್ಕ ತಂಗಿಯರು.ನೆಂಟರೆಲ್ಲಾ ಸೇರಿ ನಲಿಯುತ್ತಿರುವ ಸಡಗರದ ತಾಣ.

ಮಗಳು ಹುಟ್ಟಿದಾಗಿನಿಂದ ಹಣ ಕೂಡಿಟ್ಟು, ಒಡವೆ ಮಾಡಿಸಿ, ಅವಳನ್ನು ಅಲಂಕರಿಸಿ ಮುದ್ದಾಡಿ ಬೀಗಿದ್ದೆಷ್ಟು! ಹಿಗ್ಗಿದ್ದೆಷ್ಟು! ಅವಳ ಒಂದೊಂದು ಹೆಜ್ಜೆಗೂ ಗೆಜ್ಜೆಯ ಸದ್ದಿಗೂ ನಲಿದುದೆಷ್ಟು!ಶಾಲೆಯಲ್ಲಿ ನರ್ತನ ಮಾಡಿದಾಗ, ಬಹುಮಾನ ಪಡೆದಾಗ, ನಿಮ್ಮ “ಹುಡುಗಿ ಬಹಳ ಚೂಟಿ” ಎಂಬ ಹೊಗಳಿಕೆ ಮಾತು ಕೇಳಿದಾಗ ಗರ್ವ ಪಟ್ಟಿದ್ದೆಷ್ಟು.ಮಗಳಿಂದ ಬಂದ ಆನಂದ ಅಷ್ಟಿಷ್ಟಲ್ಲ.

ಮುಂದೆ ಉನ್ನತ ವಿದ್ಯಾಭ್ಯಾಸ ಮಾಡಿ ಪದವೀಧರೆಯಾಗಿ ಕಾಲೇಜಿನಲ್ಲೂ ಹೆಸರುವಾಸಿಯಾಗಿ ಚೆಂದದ ಹೂವಿನಂತೆ ಅರಳಿ ನಿಂತಾಗ, ನೋಡುವುದೇ ಒಂದು ಸಂಭ್ರಮ.ಹೆಚ್ಚಿನ ಓದಿಗಾಗಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಎಂದೂ ದೂರವಿಲ್ಲದ ಮಗಳು ವಿದೇಶಕ್ಕೆ ಹೊರಟು ನಿಂತಾಗ;ಗಾಬರಿ ಎಷ್ಟು, ಕಳವಳ ಎಷ್ಟು ,ಚಿಂತೆ ಎಷ್ಟು, ಹೇಗಿರುವಳೋ, ಏನೋ ಕೆಟ್ಟ ಕಾಲ ಬಂಗಾರದಂತವಳು ಎಂದು ಮನದಲ್ಲೇ ಕೊರಗಿದೆಷ್ಟೋ.

ಆದರೂ ಧೈರ್ಯ ಮಾಡಿ.ಎಲ್ಲರನ್ನೂ ವಿಚಾರಿಸಿ ಕಳಿಸಿ ಕೊಟ್ಟಾಗ ಆತಂಕದ ಸಾಗರ.ಅವಳಿಗೆ ಅಡಿಗೆ ಹೇಳಿಕೊಟ್ಟು.ಎಲ್ಲ ರೀತಿಯಲ್ಲೂ ಜೋಪಾನವಾಗಿರು ಎಂದು ಬಾರಿ ಬಾರಿ ಹೇಳಿ ಪ್ರತಿದಿನ ಮಾತಾಡಿ, ಅಲ್ಲಿರುವ ಸಂಬಂಧಿಕರ ಮಾಹಿತಿ ತಿಳಿದು.ಎಲ್ಲ ಸರಿಯಿದೆ ಎಂದು ನಿಟ್ಟುಸಿರು ಬಿಟ್ಟಿದ್ದು ಮರೆಯಲಾಗುವುದೇ?

ಮತ್ತೆ ಅಲ್ಲಿನ ಶಿಸ್ತಿನ ವಿಧ್ಯಿಭ್ಯಾಸ ಅದರ ಜೊತೆ ಪ್ರವಾಸಿ ತಾಣಗಳ ವೀಕ್ಷಣ ಹೊಸ ಅನುಭವ ಎಲ್ಲಾ ಹಂಚಿಕೊಂಡಾಗ ಹೆಮ್ಮೆ, ಆನಂದ, ಸಾರ್ಥಕತೆಯ ಅನುಭವ .

ಅಷ್ಟರಲ್ಲೇ ಒಂದು ವರುಷದ ಕಳೆದು ಮದುವೆಗೆ ವರಾನ್ವೇಷಣೆ ನಡೆಸಿ ಅಲ್ಲೇ ಕೆಲಸದಲ್ಲಿರುವ ಅನುರೂಪ ವರಸಿಕ್ಕು ಮದುವೆ ಗೊತ್ತಾದಾಗ ಆನಂದಕ್ಕೆ ಮಿತಿಯೇ ಇಲ್ಲ.

ಮನೆ ಮಂದಿಗೆಲ್ಲಾ ಸಂಭ್ರಮ ಬಟ್ಟೆ ,ಬರೆ, ಒಡವೆ ,ತೋರಣ ಹೂರಣಗಳಿಂದ ಮಂಗಳಕರವಾದ ಆನಂದದ ಅನುಭವ.

ಕಳಿಸಬೇಕಲ್ಲಾ ಎಂಬ ಸಂಕಟ ಒಂದೆಡೆ ಇದ್ದರೆ, ಜೀವನದಲ್ಲಿ ತನ್ನದೇ ಪುಟ್ಟ ಸಂಸಾರ ಶುರು ಮಾಡುವಳು ಎಂಬ ಆನಂದ ಒಂದು ಕಡೆ‌.ಜವಾಬ್ದಾರಿ ಮುಗಿಯುವುದೆಂಬ ಸಂತಸ ಒಂದೆಡೆಯಾದರೆ ಇಷ್ಟು ಬೇಗ ಇಷ್ಟು ದೊಡ್ಡವಳಾದಳಲ್ಲ ಎಂಬ ಆಶ್ಚರ್ಯ ಒಂದು ಕಡೆ.

ಎಲ್ಲಾ ತುಂಬಾ ಚೆನ್ನಾಗಿ ಮಾಡಬೇಕೆಂಬ ಉತ್ಸಾಹ ಮನೆಯ ಮೊದಲನೆ ಮದುವೆ ಎಲ್ಲರಿಗೂ ಕುತೂಹಲ ಸಂಭ್ರಮ‌.

ಮಗಳೆ ನೀ ಹುಟ್ಟಿದಾಗಿನಿಂದ ತುಂಬಿರುವೆ ನಮ್ಮ ಮನೆಗೆ ಆನಂದ .ಈಗ ಮೆಟ್ಟಿದ ಮನೆಯನ್ನೂ ಸಂತೋಷದ ಸಾಗರದಲ್ಲಿ ಮುಳುಗಿಸು.ತಗ್ಗಿ ಬಗ್ಗಿ ಹೋಂದಿಕೊಂಡು ಸೋತು ಗೆಲ್ಲು ಎಂಬ ಬುದ್ದಿಮಾತಿನೊಂದಿಗೆ ಮದುವೆಯ ಮಾಡಿ ಸಾರ್ಥಕರಾದರು ಆ ಹೆಮ್ಮೆಯ ತಂದೆ ತಾಯಿ.

ಶ್ರೀ ಕೃಷ್ಣಾರ್ಪಣಮಸ್ತು

ರೂಪಶ್ರೀ ಶಶಿಕಾಂತ್

Post Comment

You May Have Missed