Loading Now

ಬೆಂಗಳೂರು ಟರ್ಫ್ ಕ್ಲಬ್ ಹಗರಣ ಸಿಬಿಐ ಗೆ ವಹಿಸಲು ಒತ್ತಾಯ – ಎನ್ ಆರ್ ರಮೇಶ್.

ಬೆಂಗಳೂರು, ಅ.30- ತಮ್ಮ ಆಡಳಿತ ಅವಧಿಯಲ್ಲಿ ಪ್ರಭಾವಿ ಹುದ್ದೆಗೆ ನೇಮಕಾತಿ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೆಕ್ ಮೂಲಕ ಹಣ ಪಡೆದಿದ್ದು, ಇಂತಹ ಗಂಭೀರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಜೆಪಿ ವಕ್ತಾರ ಎನ್.ಆರ್.ರಮೇಶ್ ಒತ್ತಾಯಿಸಿದ್ದಾರೆ.

ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ದಾಖಲೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,2014 ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಕಿಂಗ್ಸ್ ಕೋರ್ಟ್ ವಿವೇಕ್ ಎಂದೇ ಖ್ಯಾತಿಯ ಎಲ್. ವಿವೇಕಾನಂದ ಎಂಬಾತನಿಂದ 1 ಕೋಟಿ 30 ಲಕ್ಷ ರೂಪಾಯಿ ಪಡೆದು ಬೆಂಗಳೂರು ಟರ್ಫ್ ಕ್ಲಬ್ ಉಸ್ತುವಾರಿ ಹುದ್ದೆಗೆ ನೇಮಕ ಮಾಡಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ, 3 ವರ್ಷಗಳ ಅವಧಿಗೆ ಬೆಂಗಳೂರು ಟರ್ಫ್ ಕ್ಲಬ್‌ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ನೇಮಕ ಮಾಡಿದ್ದರು. ಇದಕ್ಕೆ ಪುಷ್ಠಿ ನೀಡುವಂತೆ ಲೋಕಾಯುಕ್ತಕ್ಕೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ 2018 ರ ಏಪ್ರಿಲ್ 21 ರಂದು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸಾಲ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿರುತ್ತಾರೆ.

ಇನ್ನೂ, ಕೇಂದ್ರ ಸರ್ಕಾರದ ಗೃಹ ಇಲಾಖೆಯ ನಿಯಮ 4.1 ಸ್ಪಷ್ಟವಾಗಿ ಹೇಳುವಂತೆ ಮುಖ್ಯಮಂತ್ರಿಗಳಾಗಲೀ ಅಥವಾ ಯಾವುದೇ ಸಚಿವರಾಗಲೀ ಯಾವುದೇ ವ್ಯಕ್ತಿಗೆ ಪ್ರಭಾವೀ ಹುದ್ದೆಯನ್ನು ನೀಡಿ, ಫಲಾನುಭವಿಯಿಂದ ಯಾವುದೇ ರೀತಿಯ ಉಡುಗೊರೆಗಳನ್ನಾಗಲೀ, ನಗದನ್ನಾಗಲೀ ಅಥವಾ ಯಾವುದೇ ರೂಪದಲ್ಲಿ ಹಣವನ್ನು ಸ್ವೀಕರಿಸುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ಭ್ರಷ್ಟಾಚಾರ ನಿಗ್ರಹ ಕಾಯ್ದೆ–1988 ರ ಕಲಂ ಅಡಿಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಪ್ರಭಾವೀ ವ್ಯಕ್ತಿಯೊಬ್ಬರಿಂದ 1 ಕೋಟಿ 30 ಲಕ್ಷ ರೂಪಾಯಿಗಳಷ್ಟು ಹಣವನ್ನು ಚೆಕ್ ಮೂಲಕ ಪಡೆದು ಕ್ಲಬ್ ನ ಕಾರ್ಯಕಾರಿ ಸಮಿತಿಯ ಸದಸ್ಯ ಸ್ಥಾನಕ್ಕೆ ನಿಯೋಜನೆ ಮಾಡಿರುವುದು ಕಾನೂನು ಬಾಹಿರವಾಗಿದೆ.

ಹಾಗಾಗಿ, ಕಿಕ್ ಬ್ಯಾಕ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಅಥವಾ ಸಿಬಿಐ ತನಿಖೆಗೆ ವಹಿಸುವಂತೆ ದಾಖಲೆ ಸಮೇತ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದೇನೆ ಎಂದು ರಮೇಶ್ ತಿಳಿಸಿದರು.

Post Comment

You May Have Missed