ಪವಾಡ ಪುರುಷನ ನೆಲದಲ್ಲಿ ಹುಲಿ ಸಂರಕ್ಷಿತಾರಣ.
ಹನೂರು ಅ-08 : ಮಲೆ ಮಹದೇಶ್ವರ ಸ್ವಾಮಿಯ ವಾಹನ ಹುಲಿ ಯಾಗಿದ್ದು, ಪವಾಡ ಪುರುಷನ ನೆಲದಲ್ಲಿ ಹುಲಿ ಸಂರಕ್ಷಿತಾರಣ್ಯ ಆಗಬಹುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಚಾಮರಾಜನಗರ ಜಿಲ್ಲಾ ಪ್ರವಾಸ ನಿಮಿತ್ತ ಹನೂರು ತಾಲೂಕಿನ ಕಾವೇರಿ ವನ್ಯಧಾಮದ ಮೇಕೆದಾಟು ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿದ ವೇಳೆ ಸುದ್ದಿಗಾರರ ಪ್ರಶ್ನೆಗೆ ಅವರು ಉತ್ತರಿಸಿದರು.
ಸಚಿವ ಸೋಮಣ್ಣ ಜಿಲ್ಲಾ ಉಸ್ತುವಾರಿ ಸಚಿವರು, ಅವರು ಹುಲಿ ಸಂರಕ್ಷಿತ ಅರಣ್ಯ ಆಗುವುದಿಲ್ಲ ಎಂದು ಹೇಳಿರುವುದು ಅವರ ಅಭಿಪ್ರಾಯವಾಗಿದೆ. ನಾನು ಅರಣ್ಯ ಇಲಾಖೆ ಸಚಿವನಾಗಿ ವನ್ಯಜೀವಿ ಮತ್ತು ಕಾಡುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ. ನಮ್ಮ ಅಭಿಪ್ರಾಯಗಳು ಏನೇ ಇದ್ದರೂ ಸಂಪುಟ ಸಭೆಯಲ್ಲಿ ಚರ್ಚಿಸಿ ಬಳಿಕ ಮುಖ್ಯಮಂತ್ರಿಗಳೇ ಕೈಗೊಳ್ಳುವ ತೀರ್ಮಾನವೇ ಅಂತಿಮವಾಗಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆ ಇದ್ದು ಮೇಕೆದಾಟು ಯೋಜನೆಯನ್ನು ಜಾರಿ ಮಾಡೇ ಮಾಡುತ್ತೇವೆ. ಹೊಗೆನಕಲ್ ಜಲಪಾತ ವೀಕ್ಷಣಾ ಗೋಪುರ , ಸೇತುವೆ ಸೇರಿದಂತೆ ಕಾಡಂಚಿನ ಕುಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವತ್ತ ಸ್ಥಳೀಯ ಶಾಸಕರ ಮನವಿ ಮೇರೆಗೆ ಗಮನ ಹರಿಸಲಾಗುವುದು. ಚಂಗಡಿ ಪುನರ್ವಸತಿ ಯೋಜನೆ ಬಗ್ಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
ಗಜಪಡೆಗೆ ಪೂಜೆ ಮಾಡುವಾಗ ಅಗೌರವ ತೋರಿಲ್ಲ: ನಾನು ಹೋಗುವ ಮುನ್ನವೇ ಗಜಪಡೆಗೆ ಪೂಜೆ ಕಾರ್ಯಗಳನ್ನು ಕೈಗೊಳ್ಳಲಾಗಿತ್ತು. ನನಗೂ ಕೂಡ 61 ವರ್ಷ ವಯಸ್ಸಾಗಿದ್ದು, ಅಗೌರವ ತೋರಬೇಕೆಂಬ ಉದ್ದೇಶ ನನಗಿರಲಿಲ್ಲ. ಅಲ್ಲಿನ ಅಧಿಕಾರಿಗಳು ಮತ್ತು ಮಾವುತರ ಅಣತಿಯಂತೆ ಅತಿಯಾದ ಮಳೆಯಿದ್ದ ಕಾರಣ ರಚ್ಚೆ ಉಂಟಾಗಿದ್ದರಿಂದ ಕಾಲಿನ ಹಿಡಿತ ತಪ್ಪುತ್ತದೆ ಎಂದು ಬಟ್ಟೆಯಿಂದ ಕೂಡಿದ ಶೂ ಧರಿಸಿ ಅಲ್ಲಿಗೆ ತೆರಳಿದ್ದೆ ಎಂದು ಸಮಜಾಯಿಸಿ ನೀಡಿದರು.
ಈ ಸಂದರ್ಭದಲ್ಲಿ ಸಿಸಿಎಫ್ ಬಿ. ಕೆ. ಸಿಂಗ್, ಡಿಎಫ್ಓಗಳಾದ ಏಡುಕುಂಡಲು, ನಂದೀಶ್, ಎಸಿಎಫ್ ಗಳಾದ ಭಾಗ್ಯಲಕ್ಷ್ಮಿ, ಅಂಕರಾಜು, ಆರ್.ಎಫ್.ಒ. ಸೈಯದ್ ನದಾಫ್, ಡಿ.ಆರ್.ಎಫ್. ಒ. ಶ್ರೀನಿವಾಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Post Comment