Loading Now

ನಿರಂತರವಾಗಿ ಜನತೆಯ ಸೇವೆಗೆ ಮುಂದಾಗುತ್ತೇನೆ : ಎಂ.ಆರ್.ಮಂಜುನಾಥ್

ಹನೂರು: ಪಕ್ಷಕ್ಕೆ ಸೇರ್ಪಡೆಗೊಂಡಿರುವ ಮುಖಂಡರುಗಳ ಜೊತೆಗೂಡಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷವನ್ನು ಬಲಪಡಿಸುವ ಮೂಲಕ ನಿರಂತರವಾಗಿ ಜನತೆಯ ಸೇವೆಗೆ ಮುಂದಾಗುತ್ತೇನೆ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ, ಜಿಲ್ಲಾಧ್ಯಕ್ಷ ಎಂ.ಆರ್.ಮಂಜುನಾಥ್ ತಿಳಿಸಿದರು.

ಕಾಂಗ್ರೇಸ್ ಮತ್ತು ಬಿಜೆಪಿ ಮುಖಂಡರುಗಳು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಹಿನ್ನಲೆಯಲ್ಲಿ ಪಟ್ಟಣದ ಜೆಡಿಎಸ್ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಸ್ಥಳಿಯವಾಗಿ ಜನಮನ್ನಣೆ ಗಳಿಸಿರುವ ಸಿಂಗನಲ್ಲೂರು ಶಿವಪ್ರಕಾಶ್ ಬಾಬು, ಶಾಗ್ಯ ರವಿಕುಮಾರ್, ಎಲ್ಲೇಮಾಳ ಗ್ರಾ.ಪಂ.ಉಪಾಧ್ಯಕ್ಷ ಚಿನ್ನವೆಂಕಟ, ಕೌದಳ್ಳಿ ಇಕ್ಬಲ್ ಪಾಷ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದರಿಂದ ಪಕ್ಷಕ್ಕೆ ಆನೆ ಬಲ ಬಂದಂತಾಗಿದೆ ಎಂದರು.

ಶಾಸಕ ಆರ್.ನರೇಂದ್ರ ವಿರುದ್ಧ ತೀವ್ರ ವಾಗ್ಧಾಳಿ: ಇದೇ ವೇಳೆ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಶಾಸಕ ಆರ್.ನರೇಂದ್ರ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ ಎಂ.ಆರ್.ಮಂಜುನಾಥ್, ಶಾಸಕರ ಕಾರ್ಯಗಳಿಗೆ ಅವರೇ ಸಾಟಿ. ಸ್ಪರ್ಧಾತ್ಮಕ ಈ ಯುಗದಲ್ಲಿ ಯುವಕರು ಡಬಲ್ ಡಿಗ್ರಿ ಮಾಡಿದ್ದರೂ ಉದ್ಯೋಗವಿಲ್ಲದೇ ನಿರುದ್ಯೋಗಿಗಳಾಗಿದ್ದಾರೆ. ಅಂತವರ ಅನುಕೂಲಕ್ಕೆ ಒಂದೇ ಒಂದು ಪ್ಯಾಕ್ಟರಿಗಳು ಇಲ್ಲದೇ ಇರುವುದು ದುರದೃಷ್ಟಕರ. ಕೂಲಿ ಮಾಡಿ ವಿದ್ಯಾಭ್ಯಾಸ ಕೊಡಿಸಿದ ತಂದೆ ತಾಯಿಗಳು ಇಳಿ ವಯಸ್ಸಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸಬೇಕಾಗಿದೆ. ಶಾಸಕರಿಗೆ ಈ ಸಾಮಾನ್ಯ ಅರಿವು ಇದ್ದಿದ್ದರೆ ಇಂತಹ ಪರಿಸ್ಥಿತಿ ಬಂದೊದುಗುತ್ತಿರಲಿಲ್ಲ. ಕ್ಷೇತ್ರದ ಜನತೆ ಮೂಲಭೂತ ಸೌಕರ್ಯ ವಂಚಿತರಾಗಿ ತೀರ ಸಂಕಷ್ಟದ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇಲ್ಲಿನ ಎಷ್ಟೋ ಜನ ರಾಜ್ಯ ಅಂತರಾಜ್ಯ ನಗರಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಹುಬ್ಬೆಹುಣಸೆ, ರಾಮನಗುಡ್ಡೆ ಜಲಾಶಯಗಳಿಗೆ ನೀರು ತುಂಬಿಸುತ್ತೇನೆ ಎಂಬುದು ಭರವಸೆಯಾಗಿಯೇ ಉಳಿದಿದೆ. ಕಾವೇರಿ ನದಿ ಕೂಗಳೆತೆ ದೂರದಲ್ಲಿ ಹರಿದು ತಮಿಳುನಾಡು ಸೇರುತ್ತಿದ್ದರೂ ನದಿ ತೀರದ ಗ್ರಾಮಗಳಿಗೆ ನೀರನ್ನು ಒದಗಿಸಲು ಸಾಧ್ಯವಾಗಿಲ್ಲ. ಮಾರ್ಟಳ್ಳಿ, ಬಿದರಳ್ಳಿ ಭಾಗದ ಹೆಣ್ಣು ಮಕ್ಕಳ ಪರಿಸ್ಥಿತಿ ನೋಡಿದರೆ ಕಣ್ಣಿರು ಬರುತ್ತದೆ. ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿದೆ. ನೀರನ್ನು ಒದಗಿಸುವ ಯೋಜನೆಯನ್ನು ಮೂರು ಬಾರಿ ಶಾಸಕರಾದರೂ ಮಾಡಿಲ್ಲ. ಸಮಸ್ಯೆಗಳನ್ನು ಹೇಳಿಕೊಳ್ಳಲು ಬರುವ ಜನರನ್ನು ನೀನು ಜೆಡಿಎಸ್, ಬಿಜೆಪಿ ಪಾರ್ಟಿ ಎಂದು ಮೂದಲಿಸುವುದು ಸರಿಯಲ್ಲ. ಶಾಸಕರು ಒಂದೇ ಪಕ್ಷಕ್ಕೆ ಸೀಮಿತ ಎಂದು ಸರ್ಟಿಫಿಕೆಟ್ ನೀಡಲಾಗಿದೆಯೇ ? ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ. ಜನತೆ ಶಾಸಕರ ಧೋರಣೆ ಬಗ್ಗೆ ಗಮನಹರಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುತ್ತಾರೆ.

ಜಾಗೇರಿ ಜನತೆಗೆ ಚಾಕಲೇಟ್ ನೀಡುತ್ತಾ ಬಂದಿದ್ದಾರೆಂದು ಲೇವಡಿ:

ಮೂರು ಅವಧಿ ಶಾಸಕರಾದ ಆರ್.ನರೇಂದ್ರ ಅವರು ಇದುವರೆಗೆ ಪಟ್ಟ ನೀಡಲು ಸಾಧ್ಯವಾಗಿಲ್ಲ. ಮೊದಲ ಬಾರಿಗೆ ಅನುಭವ ಇಲ್ಲ ಎಂದುಕೊಂಡರೆ ಎರಡನೇ ಅವಧಿಯಲ್ಲೂ ಮೂರನೇ ಅವಧಿಯಲ್ಲೂ ಪಟ್ಟ ನೀಡಲು ವಿಫಲರಾಗಿದ್ದಾರೆ. ಶಾಸಕರ ತಂದೆ ದಿ.ಜಿ.ರಾಜೂಗೌಡರು ಜಾಗೇರಿ ಪ್ರದೇಶದಲ್ಲಿ ವಾಸಿಸಲು ಜನತೆಗೆ ಅವಕಾಶ ಕಲ್ಪಿಸಿದ್ದರು. ಪ್ರತಿ ಚುನಾವಣೆಯಲ್ಲಿ ಇಲ್ಲಿನ ಜನತೆಗೆ ಮಕ್ಕಳು ಹತ್ತರೆ ಚಾಕ್‍ಲೆಟ್ ನೀಡಿ ಸಂತೈಸುವಂತೆ ಮುಂದಿನ ಬಾರಿ ಖಂಡಿತ ಆಗುತ್ತದೆ ಎಂದು ಭರವಸೆಗಳನ್ನು ನೀಡಿ ಸಂತೈಸುತ್ತಲೇ ಬಂದಿದ್ದಾರೆ. ಈ ಬಗ್ಗೆ ಇಲ್ಲಿನ ಜನತೆ ಲೇವಡಿ ಮಾಡುತ್ತಾರೆ ಎಂದ ಅವರು ಪಟ್ಟ ಕೊಡಿಸಲು ದಿಸೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಮಾಡಿದ್ದೇನೆ. ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಬಗ್ಗೆ ಮಾತನಾಡುವುದಾಗಿ ರಾಜ್ಯಾಧ್ಯಕ್ಷರು ತಿಳಿಸಿದ್ದಾರೆ. ಉಳಿದ ಅವಧಿಯಲ್ಲಾದರೂ ಶಾಸಕ ಆರ್.ನರೇಂದ್ರ ಅವರು ಸಾರ್ವಜನಿಕ ಕೆಲಸಗಳಿಗೆ ಒತ್ತನ್ನು ನೀಡಲಿ ಇಲ್ಲದಿದ್ದರೆ ಹೋರಾಟದ ಮೂಲಕವೇ ನಾವು ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದರು.

ಕಾಂಗ್ರೇಸ್, ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ ಮುಖಂಡರುಗಳು ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಶಾಗ್ಯ ರವಿಕುಮಾರ್ ಮಾತು ಪ್ರಾರಂಭಿಸುತ್ತಲೇ ಭಾವುಕರಾಗಿ ಕಣ್ಣಿರಿಟ್ಟರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ಶಿವಮೂರ್ತಿ, ಪ.ಪಂ.ಸದಸ್ಯರಾದ ಆನಂದ್‍ಕುಮಾರ್, ಮುಮ್ತಾಜ್ ಬಾನು, ಮಹೇಶ್‍ನಾಯಕ, ಜಿ.ಕೆ.ಹೊಸೂರು ಬಸವರಾಜು, ಮಂಜೇಶ್, ಜಸ್ಮಿಂ ಪಾಷ, ಶಾಗ್ಯ ಬಾಬು, ಸಿಂಗನಲ್ಲೂರು ರಾಜಣ್ಣ, ಅಮೀನ್, ಸಿದ್ದಪ್ಪಾಜಿ ನಾಯಕ, ದಲಿತ್ ಕಿರಣ್, ಮಾದೇವು ಇನ್ನಿತರರು ಇದ್ದರು.

Post Comment

You May Have Missed