Loading Now

ದಶಪಥ ರಸ್ತೆ ನಿರ್ಮಾಣ ಕುರಿತ ಸಂವಾದಕ್ಕೆ ಬಾರದ ಸಂಸದ: ಟೀಕೆ

ಮೈಸೂರು ಸೆ.೬: ಬೆಂಗಳೂರು-ಮೈಸೂರು ದಶಪಥದ ರಸ್ತೆ ನಿರ್ಮಾಣದ ಸತ್ಯಾಸತ್ಯತೆಯ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಅವರು ಸಂಸದ ಪ್ರತಾಪಸಿಂಹ ಅವರ ಜತೆ ಭಾನುವಾರ ನಿಗದಿ ಮಾಡಿದ್ದ ಸಂವಾದಕ್ಕೆ ಪ್ರತಾಪಸಿಂಹ ಗೈರಾಗಿದ್ದು, ‘ಪ್ರತಾಪಸಿಂಹ ಒಬ್ಬ ಹೇಡಿ’ ಎಂದು ಲಕ್ಷ್ಮಣ ಅವರು ಟೀಕಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಬೆಳಿಗ್ಗೆ ೧೧ಕ್ಕೆ ನಿಗದಿಯಾಗಿದ್ದ ಕಾರ್ಯಕ್ರಮದ ವೇದಿಕೆಯ ಒಂದು ಆಸನಕ್ಕೆ ಪ್ರತಾಪಸಿಂಹ ಸಂಸದರು ಎಂದು ಬರೆದಿದ್ದ ಚೀಟಿ ಅಂಟಿಸಿ ಅದನ್ನು ಖಾಲಿ ಬಿಡಲಾಗಿತ್ತು. ಪ್ರತಾಪ ಸಿಂಹ ಅವರು ಬಾರದೆ ಇರುವುದರಿಂದ ಲೋಕೋಪಯೋಗಿ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರೂ ಬಂದಿಲ್ಲ ಎಂದು ಲಕ್ಷ್ಮಣ ಅವರು ಸ್ಪಷ್ಟಪಡಿಸಿದರು. ಸಂವಾದಕ್ಕೆ ಬರುವಂತೆ ಮೂರು ಪತ್ರ ಬರೆದು ಪ್ರತಾಪಸಿಂಹ ಅವರನ್ನು ಆಹ್ವಾನಿಸಲಾಗಿತ್ತು. ಸಾರ್ವಜನಿಕರ ಬಗ್ಗೆ ಕನಿಷ್ಠ ಕಾಳಜಿ ಇದ್ದರೆ ಅವರು ಬರಬೇಕಿತ್ತು. ದಶಪಥ ಕಾಮಗಾರಿಗೆ ಸಂಬಂಧಿಸಿ ಅವರು ಸುಳ್ಳು ಹೇಳುತ್ತಿದ್ದು, ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ಅವರು ಪತ್ರ ಬರೆದು ಪಲಾಯನ ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಇನ್ನುಮುಂದೆ ಅವರು ಈ ವಿಚಾರದ ಬಗ್ಗೆ ಮಾತನಾಡಬಾರದು ಎಂದರು. ‘ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಮಾಧ್ಯಮಗಳ ಮೂಲಕ ಬಿಡುಗಡೆಮಾಡಿದ್ದೇವೆ. ಮುಂದಿನ ಶನಿವಾರ ಅವರ ಕಚೇರಿ ಮುಂದೆ ದಾಖಲೆ ಪ್ರದರ್ಶಿಸಲಾಗುವುದು. ಮುಂದೆ ಅವರ ಪಕ್ಷದ ಕಚೇರಿ ಮುಂದೆಯೂ ದಾಖಲೆ ಪ್ರದರ್ಶಿಸಲಾಗುವುದು. ಮುಂದೆ ನೀವೇ ದಿನಾಂಕ ನಿಗದಿಪಡಿಸಿ ನಾವು ಬರುತ್ತೇವೆ’ ಎಂದು ಸವಾಲೆಸೆದರು. ಪತ್ರದ ಮೂಲಕವೇ ಹತ್ತು ಪ್ರಶ್ನೆಗಳಿಗೆ ಉತ್ತರಿಸುವಂತೆ ಅವರು ಒತ್ತಾಯಿಸಿದರು. ೨೦೧೭ರಲ್ಲಿ ಉದ್ಘಾಟಿಸುವುದಾಗಿ ಹೇಳಿದ್ದ ನಾಗನಹಳ್ಳಿಯ ರೈಲ್ವೆ ಟರ್ಮಿನಲ್‌ನ ಪ್ರಗತಿ ಯಾವ ಹಂತದಲ್ಲಿದೆ ಎಂಬುದನ್ನು ಜನರಿಗೆ ತಿಳಿಸಬೇಕು ಎಂದರು. 

Post Comment

You May Have Missed