Loading Now

ಕನ್ನಡ ಭಾಷೆಯ ಸೊಬಗು-ಒಂದು ಚಿಂತನೆ.

“ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು” ಎಂಬ ಕವಿವಾಣಿಯು ಅನುಭವಕ್ಕೆ ಬರಬೇಕೆಂದರೆ, ನಾವು ಕನ್ನಡ ಮಾತಾಡದ ಊರುಗಳಿಗೆ ಹೋಗಬೇಕು.ಅಲ್ಲಿ ಕನ್ನಡ ಕೇಳಿಸಿದಾಗ ಆಗುವ ಆನಂದ ಅವರ್ಣನೀಯ.ಪರದೇಶದಲ್ಲಿ ಕೇಳಿದಾಗಲಂತೂ ಸಂಬಂಧಿಗಳೇ ಸಿಕ್ಕಷ್ಟು ಖುಷಿ.

ಈ ನಮ್ಮ ಭಾಷೆಯ ಸೊಬಗು ಬೇರೆ ಭಾಷೆಗಳಲ್ಲಿ ಕಾಣಲು ಸಿಗದು.ಎಷ್ಟು ಪದಗಳು ಇದೆ ಎಂದರೆ ಸಂಬಂಧಿಗಳೆಲ್ಲರಿಗೂ ಪ್ರತ್ಯೇಕ ಹೆಸರುಗಳು.ದೊಡ್ಡಮ್ಮ, ದೊಡ್ಡಪ್ಪ, ಮಾವ, ಅತ್ತೆ, ಅಮ್ಮಮ್ಮ, ಅಜ್ಜಿ, ತಾತ, ಚಿಕ್ಕತ್ತೆ, ಸೋದರಮಾವ ,ಮೈದುನ, ನಾದಿನಿ, ನೆಗಣ್ಣಿ, ಮುಂತಾದ ಅನೇಕ ಹೆಸರುಗಳು ಸಂಬಂಧ ಏನೆಂದು ತನ್ನಷ್ಟಕ್ಕೆ ತಿಳಿಸುವಂತಹವು.ಇಂಗ್ಲೀಷ್ ನಲ್ಲಿ ಇವರೆಲ್ಲರೂ ಆಂಟಿ, ಅಥವಾ ಅಂಕಲ್ ಅಲ್ಲವೇ?

ಇದಲ್ಲದೆ ಅನ್ವರ್ಥಕ ಹೆಸರುಗಳು, ಕೆಂಪು ಕೂದಲಿರುವ ಕೆಂಚ, ಕಪ್ಪಿರುವವಳು ಕಪ್ಪಿ,ಉಬ್ಬು ಹಲ್ಲು ಇದ್ದರೆ ಉಬ್ಬಿ, ಕುಳ್ಳಗೆ ಇದ್ದರೆ ಕುಳ್ಳ, ಕುಳ್ಳಿ,ಕಿವುಡುತನ ಆದರೆ ಕೆಪ್ಪ, ಕುರುಡ, ಹೀಗೆ ಅವರನ್ನು ನೋಡದೆ ಅವರು ಹೇಗಿದ್ದಾರೆ ಎಂದು ತಿಳಿಸುವ ಅಡ್ಡ ಹೆಸರುಗಳು.

ಕೇಳಿಸುವ ಶಬ್ದಗಳನ್ನು ಸೂಚಿಸುವ ಪದಗಳು.ಟಪ ಟಪ ಮಳೆ ಸುರಿಯುವುದು, ಘಲ್ ಘಲ್ ಗೆಜ್ಜೆ ಶಬ್ದ, ಲೊಚಗುಟ್ಟುವ ಹಲ್ಲಿ, ಭೌ ಎನ್ನುವ ನಾಯಿ, ಮಿಯಾಂವ್ ಎನ್ನುವ ಬೆಕ್ಕು.ಢಂ ಎಂದ ಪಟಾಕಿ.ಹೀಗೆ ಕಿವಿಗೆ ಕೇಳಿಸುವ ಶಬ್ದಗಳನ್ನೂ ಉಪಯೋಗಿಸಿ ಮಾತಾಡುವ ಭಾಷೆ ನಮ್ಮದು.

ಇನ್ನು ಒತ್ತಕ್ಷರ ಕಾಗುಣಿತಕ್ಕೆ ಪ್ರಾಮುಖ್ಯತೆ ಕೊಡುವ ಭಾಷೆ‌.ಒಂದು ಅನುಸ್ವರ ದೀರ್ಘ ಕಾಗುಣಿತ ತಪ್ಪಿಸಿದರೆ ಅರ್ಥ ಅನರ್ಥ ಆಗುತ್ತದೆ.

ಕೊಡು ಎಂದರೆ ಕೊಡುವುದ ಕೋಡು ಎಂದರೆ ಪ್ರಾಣಿಗಿರುವ ಕೋಡು.ಕೇವಲ ಒಂದು ದೀರ್ಘ ಮರೆತರೆ ಬೇರೆ ಅರ್ಥ.ಕಿವಿ ಬದಲು ಕೀವು ಎಂದರೆ ಹೇಗೆ? ಜಗ ಎಂದರೆ ಜಗತ್ತು.ಜಾಗ ಎಂದರೆ ಸ್ಥಳ.ಮಗ ಎಂದರೆ ತನಯ ಮೊಗ ಎಂದರೆ ಮುಖ ಮೂಗ ಎಂದರೆ ಮಾತುಬರದವ,ಮೃಗ ಎಂದರೆ ಪ್ರಾಣಿ , ಮಂಗ ಎಂದರೆ ಕೋತಿ, ಹೀಗೆ ಮ ಗ ಎರಡು ಅಕ್ಷರ ಬರೆದು ಮ ಕಾರದ ಕಾಗುಣಿತ ಬದಲಾಯಿಸಿದಾಗ ಇಷ್ಟು ಪದ ಸಿಗುತ್ತದೆ.

ಹಾಗೆ ಪದ ಎಂದರೆ ಎರಡು ಅಕ್ಷರ ಸೇರಿ ಆಗುವುದು.ಪಾದ ಎಂದರೆ ಕಾಲಿನ ಭಾಗ, ಸದಾ ಎಂದರೆ ಯಾವಾಗಲೂ, ಸೀದ ಎಂದರೆ ನೇರ, ಸಾದಾ ಎಂದರೆ ಸಾಮಾನ್ಯ .ಕನ್ನಡದಲ್ಲಿ ಡ ಗುಣಿಸು ಮಾಡಿದರೆ ಕನ್ನಡಿ!!ಅಲ್ಲವೇ.ತಪ ಎಂದರೆ ತಪಸ್ಸು. ತಾಪ ಎಂದರೆ ಬೆಂಕಿಯ ಶಾಖ.

ಎಚ್ಚರಿಕೆಯಿಂದ ಬಳಸಬೇಕು.ಅನೇಕ ಪದಗಳಿಗೆ ಒಂದಕ್ಕಿಂತ ಹೆಚ್ಚು ಅರ್ಥ ಇರುತ್ತದೆ.ಉದಾಹರಣೆಗೆ ಎತ್ತಿನ ಕೋಡು ಬಹಳ ಚೆನ್ನಾಗಿ ಅಲಂಕಾರ ಮಾಡಿದ್ದಾರೆ. ಎಂದಾಗ ಕೋಡು ಎತ್ತಿನದು.ಆದರೆ ಎಷ್ಟು ಕೋಡು ಬಂದಿದೆ ನೋಡು ಅವಳಿಗೆ ಎಂದರೆ ಬಹಳ ಜಂಭ ಎಂದು ಅರ್ಥ!

ಬೇಡ ಎಂದರೆ ಬೇಟೆಗಾರ, ಬೇಡ ಎಂದರೆ ತಿರಸ್ಕಾರ .ಹೀಗೆ ಒಂದೇ ಪದ ವಾಕ್ಯದಲ್ಲಿ ಹೇಗೆ ಉಪಯೋಗವಾಗಿದೆ ಎನ್ನುವುದರ ಪ್ರಕಾರ ಅರ್ಥ ವ್ಯತ್ಯಾಸ ಆಗುತ್ತದೆ.ಅದೇ ರೀತಿ ಪಾಪು ಎಂದರೆ ಪುಟ್ಟ ಮಗು.ಅಯ್ಯೋ ಪಾಪ ಎಂದರೆ ಕರುಣೆ ಅಭಿವ್ಯಕ್ತಿ ಮಾಡುವ ವಿಧಾನ.

ಅದರ ಜೊತೆ ಬೇರೆ ಭಾಷೆಯಿಂದ ಬಂದ ಪದಗಳು ಕೊಂಬು ಸೇರಿಸಿಕೊಂಡು ಕನ್ನಡ ಪದ ಆಗಿವೆ ಉದಾಹರಣೆಗೆ ಇಂಗ್ಲಿಷ್ ಭಾಷೆಯಿಂದ ಬಸ್ಸು, ಕಾರು, ಬೈಕು, ಕೂಂಬು.ಇತ್ಯಾದಿ.ಸಂಸ್ಕತ ಪದಗಳಂತೂ ಕನ್ನಡದಲ್ಲಿ ತುಂಬಿವೆ.

ಇದೆಲ್ಲದರ ಜೊತೆ ಆಯಾ ಪ್ರದೇಶದ ವಿಶೇಷ ಭಾಷಾ ಪ್ರಯೋಗಗಳಿವೆ.ಮಂಗಳೂರಿನವರು ತಲೆಗೆ ಮಂಡೆ ಎನ್ನುತ್ತಾರೆ.ಕನ್ನಡ ಬರೆಯುವ ರೀತಿ ಮಾತಾಡುತ್ತಾರೆ.ಧಾರವಾಡದ ಸೊಗಡು ಬೇರೆ ರೀತಿ.ಬೆಂಗಳೂರಿನ ಕನ್ನಡ ಇಂಗ್ಲಿಷ್ ಮಿಶ್ರಿತ ಕಂಗ್ಲೀಷ್.ಮಹಾರಾಷ್ಟ್ರ ಹತ್ತಿರದ ಭಾಗಗಳಲ್ಲಿ ಮರಾಠಿ, ಉರ್ದು ಮಿಶ್ರಿತ ಕನ್ನಡ.ಕೃಷ್ಣಗಿರಿಯಲ್ಲಿ ತಮಿಳು ತೆಲುಗು ಮತ್ತು ಕನ್ನಡ ಸೇರಿರುವ ಭಾಷೆ.

ಹೀಗೆ ಒಂದೇ ಕನ್ನಡ ಆದರೂ, ಅದಕ್ಕೆ ನೂರಾರು ಮುಖಗಳಿವೆ, ಪ್ರಾಂತ್ಯದ ಪ್ರಕಾರದ ರೂಪುರೇಷೆ ಪಡೆದುಕೊಂಡಿದೆ. ಭಾರತ ದೇಶದಂತೆ ಕನ್ನಡವೂ ವಿಭಿನ್ನತೆಯಲ್ಲಿ ಏಕತೆ ತೋರಿಸುವ ಭಾಷೆ.

ಇನ್ನು ಹಳೇ ಕನ್ನಡ ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಾಧನೆ ಬೇಕು.ಅದರಲ್ಲಿ ಬಳಸಿರುವ ಕೆಲವು ಅಕ್ಷರ ಈಗ ನಾವು ಬಳಸುತ್ತಿಲ್ಲ. ಹೀಗೆ ನಮ್ಮ ಭಾಷೆ ಬಹಳ ಸೊಗಸಾದ ಸುಂದರ ಭಾಷೆ.ಕನ್ನಡ ರಾಜ್ಯೋತ್ಸವದ ಈ ಸಂದರ್ಭದಲ್ಲಿ ಭಾಷೆಯ ಸೊಗಡನ್ನು ತಿಳಿಯೋಣ.ಎಚ್ಚರಿಕೆಯಿಂದ ಬಳಸೋಣ.ಹಾಗಂತ ಇದು ನಮಗೆ ಕಷ್ಟವೇ? ಖಂಡಿತ ಇಲ್ಲ ನಮ್ಮ ರಕ್ತಗತವಾಗಿರುವ ಈ ಎಲ್ಲಾ ವಿಚಾರ ಸುಲಿದ‌ ಬಾಳೆಹಣ್ಣಿನಂತೆ ನಾವು ಅರ್ಥಮಾಡಿಕೊಂಡು ಬಳಸುತ್ತಿದ್ದೇವೆ.

ಇಂತಹ ಭಾಷೆ ಉಳಿಸಿ, ಬಳಸಿ, ಬೆಳೆಸಿ ಇದರ ಆನಂದ ನಮ್ಮ ಮುಂದಿನ ಜನಾಂಗಕ್ಕೆ ಉಳಿಸುವ ಜವಾಬ್ದಾರಿ ನಮ್ಮದು.ಈ ನಿಟ್ಟಿನಲ್ಲಿ ಶ್ರಮಿಸೋಣ.ಕನ್ನಡಮ್ಮನ ಕೃಪೆಗೆ ಪಾತ್ರರಾಗೋಣ .

ಶ್ರೀ ಕೃಷ್ಣಾರ್ಪಣಮಸ್ತು

– ರೂಪಶ್ರೀ ಶಶಿಕಾಂತ್

Post Comment

You May Have Missed