ಕಟ್ಟಡ ಕಾರ್ಮಿಕರು ಅತಿ ಹೆಚ್ಚಿನ ಶ್ರಮ ಜೀವಿಗಳಾಗಿದ್ದು ಸರ್ಕಾರದಿಂದ ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಒದಗಿಸಿಕೊಡಲು ಸದಾ ಸಿದ್ದವಾಗಿರುವುದಾಗಿ ಶಾಸಕ ಎಂ.ಅಶ್ವಿನ್ ಕುಮಾರ್ ಭರವಸೆ
ತಿ.ನರಸೀಪುರ. ನ.೦9 – ಕಟ್ಟಡ ಕಾರ್ಮಿಕರು ಅತಿ ಹೆಚ್ಚಿನ ಶ್ರಮ ಜೀವಿಗಳಾಗಿದ್ದು ಸರ್ಕಾರದಿಂದ ಅವರಿಗೆ ದೊರಕಬೇಕಾದ ಸೌಲಭ್ಯಗಳನ್ನು ಕಾಲ ಕಾಲಕ್ಕೆ ಒದಗಿಸಿಕೊಡಲು ಸದಾ ಸಿದ್ದವಾಗಿರುವುದಾಗಿ ಶಾಸಕ ಎಂ.ಅಶ್ವಿನ್ ಕುಮಾರ್ ಭರವಸೆ ನೀಡಿದರು.
ಪಟ್ಟಣದ ಡಾ.ಬಾಬು ಜಗಜೀವನರಾಂ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ನಡೆದ ತಾಲ್ಲೂಕು ಮಟ್ಟದ ಪ್ರಥಮ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಭವ್ಯ ಕಟ್ಟಡಗಳ ನಿರ್ಮಾಣದ ಮೂಲಕ ಸುಂದರ ಸಮಾಜ ಕಟ್ಟುವಲ್ಲಿ ಶ್ರಮಿಸುತ್ತಿರುವ ಲಕ್ಷಾಂತರ ಕಟ್ಟಡ ಕಾರ್ಮಿಕರ ಬದುಕಿಗೆ ನೆಲೆ ದೊರಕಿಸಿಕೊಡಲು ಸರ್ಕಾರ ಸಹ ಶ್ರಮಿಸುತ್ತಿದ್ದು ಕಟ್ಟಡ ಕಾರ್ಮಿಕರ ಭವಿಷ್ಯ ನಿಧಿಯಿಂದ ಮಕ್ಕಳ ವಿದ್ಯಾರ್ಥಿ ವೇತನ, ಮದುವೆಗಳಿಗೆ ಸಹಾಯ ಧನದಂತಹ ಉತ್ತಮ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.ಆದಾಗ್ಯೂ ಕಾರ್ಮಿಕರಿಗೆ ನೀಡುತ್ತಿರುವ ಯೋಜನೆಗಳು ಸಾಲುತ್ತಿಲ್ಲವೆಂಬ ಕಾರ್ಮಿಕರ ಮನವಿಗೆ ಸ್ಪಂದಿಸಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.
ಕಟ್ಟಡ ಕಾರ್ಮಿಕರಿಗಾಗುತ್ತಿರುವ ಅನ್ಯಾಯ ಹಾಗು ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಿಗಿಸಿಕೊಡಲು ತಾವು ಬದ್ದವಾಗಿರುವುದಾಗಿ ತಿಳಿಸಿದ ಅವರು ಅಸಂಘಟಿತ ಕಾರ್ಮಿಕರು ಪುರಸಭೆ ಹಾಗು ಪಂಚಾಯ್ತಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ.ಮೊದಲು ಸಂಘಟಿತ ಕಾರ್ಮಿಕರಿಗೆ ಮಾತ್ರವೇ ಸರ್ಕಾರದಿಂದ ಅನುಮೋದನೆ ದೊರಕಿಸಿಕೊಡಲಾಗಿತ್ತು.ಆದರೆ ಕೊರೊನಾ ಹಿನ್ನೆಲೆಯಲ್ಲಿ ಅಸಂಘಟಿತ ಕಾರ್ಮಿಕರು ಸಹ ಸಂಘಟಿತ ಕಾರ್ಮಿಕರಿಗೆ ಸಿಗುತ್ತಿರುವ ಸವಲತ್ತುಗಳನ್ನು ದೊರಕಿಸಿ ಕೊಡುವ ಬೇಡಿಕೆಗೆ ಸ್ಪಂದಿಸಿ ಸರ್ಕಾರ ಅದರ ಸಾಧ್ಯತೆಗಳ ಬಗ್ಗೆ ಚಿಂತನೆ ನಡೆಸಿದೆ ಎಂದರು.
ಸಿಡಬ್ಲ್ಯೂಎಫ್ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಮಾತನಾಡಿ ಕೋವಿಡ್ ವೇಳೆಯಲ್ಲಿ ಕೆಲ ಕಟ್ಟಡ ಕಾರ್ಮಿಕರ ಬದುಕು ಬೀದಿ ಪಾಲಾಗಿತ್ತು. ಈ ಕುರಿತು ಯಾವ ಸರ್ಕಾರವು ಸರಿಯಾದ ನೆರವು ನೀಡಲಿಲ್ಲ. ಕಲ್ಯಾಣ ಮಂಡಳಿ ಕೆಲ ಸೌಲಭ್ಯಗಳು ನೀಡಿದರೂ ಸಹ ಸಕಾಲಕ್ಕೆ ಕಾರ್ಮಿಕರಿಗೆ ತಲುಪಲೇ ಇಲ್ಲ.ಕಾರ್ಮಿಕರಿಗೆ ನೀಡಲಾದ ರೇಷನ್ ಕಿಟ್ ನಲ್ಲೂ ಸರ್ಕಾರ ಕೋಟ್ಯಾಂತರ ರೂ.ಗಳ ಅವ್ಯವಹಾರವೆಸಗಿದೆ ಎಂದು ದೂರಿದರು.
ಕಾರ್ಯಕ್ರಮದಲ್ಲಿ ಪುರಸಭಾ ಅಧ್ಯಕ್ಷ ಎಸ್.ಮದನ್ ರಾಜ್, ಉಪಾಧ್ಯಕ್ಷೆ ಪ್ರೇಮ, ಸಿಐಟಿಯು ಜಿಲ್ಲಾಧ್ಯಕ್ಷ ಎನ್.ಕೆ.ಬಾಲಾಜಿ ರಾವ್, ಸಿಡಬ್ಲ್ಯೂಎಫ್ ಐ ಜಿಲ್ಲಾಧ್ಯಕ್ಷ ವಿ.ಸೋಮ ಶಂಕರ್, ಹೆಚ್.ಎಂ.ಬಸವಯ್ಯ, ಸಿಡಬ್ಲ್ಯೂಎಫ್ ಐ ತಾಲೂಕು ಅಧ್ಯಕ್ಷ ಸಿ.ಪುಟ್ಟ ಮಲ್ಲಯ್ಯ, ಪ್ರಧಾನ ಕಾರ್ಯದರ್ಶಿ ಸಿ.ಬಿ.ನವೀನ್ ಕುಮಾರ್ ಮತ್ತಿತರರಿದ್ದರು



Post Comment