ಆಟದ ಮೈದಾನ ವಶಪಡಿಸಿಕೊಳ್ಳಲು ಯತ್ನ.
ಹನೂರು: ಗೌತಮ್ ವಿದ್ಯಾಸಂಸ್ಥೆಯ ಆಟದ ಮೈದಾನವನ್ನು ರೇಷ್ಮೆ ಇಲಾಖೆ ವ್ಯಾಪ್ತಿಗೆ ವಶಪಡಿಸಿಕೊಳ್ಳಲು ರಾಜಕೀಯ ಮಾಡಲಾಗುತ್ತಿದ್ದು ಇದರಿಂದ ನಮ್ಮ ಶಾಲೆಯ ಮಕ್ಕಳ ಕ್ರೀಡಾ ಚಟುವಟಿಕೆಗೆ ತೊಂದರೆಯಾಗುತ್ತದೆ ಎಂದು ಗೌತಮ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಾವಕಯ್ಯ ಹಾಗೂ ಕಾರ್ಯದರ್ಶಿ ರವೀಂದ್ರ ಅವರು ರೇಷ್ಮೆ ಇಲಾಖೆ ಹಾಗೂ ಶಾಸಕ ನರೇಂದ್ರ ಅವರ ವಿರುದ್ಧ ಆರೋಪ ಮಾಡಿದ್ದಾರೆ.
ಹನೂರು ಪಟ್ಟಣದ ಗೌತಮ್ ಶಾಲೆಯಲ್ಲಿ ಪೋಷಕರನ್ನು ಒಳಗೊಂಡಂತೆ ಶಾಲೆಯ ಆಡಳಿತ ಮಂಡಳಿಯವರು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ರೇಷ್ಮೆ ಇಲಾಖೆ ಹಾಗೂ ಶಾಸಕ ಆರ್. ನರೇಂದ್ರ ಅವರ ವಿರುದ್ಧ ಆರೋಪಿಸಿ ಮಾತನಾಡಿದ ಅವರು ಹನೂರು ಗೌತಮ್ ವಿದ್ಯಾಸಂಸ್ಥೆಯು ಇಡೀ ತಾಲೂಕಿನಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಏಕೈಕ ಸಂಸ್ಥೆಯಾಗಿದೆ.
ಕಳೆದ 12 ವರ್ಷಗಳಿಂದ ಗೌತಮ್ ವಿದ್ಯಾಸಂಸ್ಥೆಯು ಸ್ವಾಧೀನದಲ್ಲಿರುವ ಆಟದ ಮೈದಾನವು ಶಾಲೆಗೆ ಹೊಂದಿಕೊಂಡಂತಿರುವ ಸರ್ವೆ ನಂ. 208/ಬಿ1 ರಲ್ಲಿ 36 ಸೆಂಟ್ ಜಮೀನು ಸರ್ಕಾರಿ ಖರಾಬು ಜಮೀನಾಗಿದ್ದು ಕಳೆದ 20 ವರ್ಷದಿಂದ ನಮ್ಮ ಸ್ವಾಧೀನಾನುಭವದಲ್ಲಿರುತ್ತದೆ. ಆದರೆ ರೇಷ್ಮೆ ಇಲಾಖೆಯವರು ಇತ್ತೀಚೆಗೆ ಈ ಜಾಗ ನಮ್ಮ ಇಲಾಖೆಯದು ಎಂದು ತಗಾದೆ ತೆಗೆಯುತ್ತಿದ್ದಾರೆ.
ಇದಕ್ಕೆ ಯಾವುದೇ ದಾಖಲಾತಿಗಳು ಇಲಾಖೆಯಲ್ಲಿ ಇರುವುದಿಲ್ಲ ಸದರಿ ಜಾಗವನ್ನು ಶಾಲೆಯ ಆಟದ ಮೈದಾನವಾಗಿ ಮಾರ್ಪಡಿಸಲು ಸಾಕಷ್ಟು ವೆಚ್ಚ ಮಾಡಿರುತ್ತೇವೆ. ಇದಕ್ಕೆ ಸಂಬಂಧಿಸಿದಂತೆ ಉಚ್ಚನ್ಯಾಯಾಲಯದಲ್ಲಿ ಪ್ರಕರಣ ಸಂಖ್ಯೆ 52074/2019 ( ಕೆಎಸ್ಆರ್- ಆರ್.ಇಎಸ್) ದಿನಾಂಕ. 13-12-2019 ರಲ್ಲಿ ದಾವೆ ಹೂಡಿದ್ದು ಇದು ಇನ್ನೂ ವಾದ- ಪ್ರತಿವಾದದ ಹಂತದಲ್ಲಿದೆ.
ಇಷ್ಟಾದರೂ ರೇಷ್ಮೆ ಇಲಾಖೆಯವರು ಕಾಂಪೌಂಡ್ ನಿರ್ಮಾಣ ಮಾಡಲು ಏಕಾಏಕಿ ಬಂದು ಗುಂಡಿ ತೋಡಿಸಿ ಕಾಮಗಾರಿ ಮಾಡಲು ಮುಂದಾಗಿದ್ದಾರೆ. ಇಂತಹ ಅಯೋಗ್ಯಕರ ಕೆಲಸಕಾರ್ಯಗಳಿಗೆ ಶಾಸಕ ನರೇಂದ್ರ ರವರು ಅಧಿಕಾರ ದರ್ಪದಿಂದ ಕುಮ್ಮಕ್ಕು ನೀಡಿದ್ದು. ಸಂಸ್ಥೆಗೆ ಪ್ರಾರಂಭದಿಂದಲೂ ತೊಂದರೆ ಕೊಡುತ್ತಿದ್ದಾರೆ.
ಮಾಹಿತಿಯ ಪ್ರಕಾರ ಶಾಸಕರು ಹನೂರಿನಲ್ಲಿ ಶೈಕ್ಷಣಿಕ ಸಂಸ್ಥೆ ತೆರೆಯಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದ್ದು ಇದಕ್ಕಾಗಿ ನಮ್ಮ ಸಂಸ್ಥೆ ಮುಚ್ಚಿಸುವ ಕೆಲಸ ಮಾಡುತ್ತಿದ್ದಾರೆ ಆದ್ದರಿಂದ ಈ ಬಗ್ಗೆ ಇದೇ ರೀತಿ ಸಂಸ್ಥೆಗೆ ವಿನಾಕಾರಣ ತೊಂದರೆ ಕೊಡುವುದು ಮುಂದುವರೆದಲ್ಲಿ ತಾಲೂಕಿನಾದ್ಯಂತ ದಲಿತ ಸಂಸ್ಥೆಗಳ ಮೊರೆಹೋಗಿ ಉಗ್ರ ಪ್ರತಿಭಟನೆಯನ್ನು ಮಾಡಲು ಸಿದ್ದರಿದ್ದೇವೆ ಎಂದು ಆಗ್ರಹಿಸಿದರು.
ಹನೂರು ಪಟ್ಟಣದಲ್ಲಿ ಗೌತಮ್ ವಿದ್ಯಾಸಂಸ್ಥೆಯ ಶಾಲೆ ನೊಂದಣಿ ಸಂಖ್ಯೆ 10/2011-12ರ ಮೇರೆಗೆ ಅನುಮತಿ ಪಡೆದು ಪ್ರಸಕ್ತ 1ರಿಂದ 10ನೇ ತರಗತಿ ವರೆಗೆ 460 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿಶೇಷವಾಗಿ ಶೇ 65% ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿದ್ದಾರೆ.
ಶಾಲೆಯಲ್ಲಿನ ವರ್ಗದವರ ಏಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ದುಬಾರಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಲು ಸಮುದಾಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಇಂತಹ ಕುಟುಂಬಗಳ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಡಿಮೆ ಶಾಲಾ ಶುಲ್ಕ ಪಡೆದು ಗುಣಮಟ್ಟದ ಆಂಗ್ಲಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ.
ಶಾಲೆಯು ಕೇವಲ 10 ವರ್ಷಗಳಲ್ಲಿ ಉತ್ತಮ ಬೆಳವಣಿಗೆ ಹೊಂದಿದ್ದು ಇದನ್ನು ಸಹಿಸದ ಪಟ್ಟಭದ್ರ ಹಿತಾಶಕ್ತಿಗಳು ತಾಲೂಕಿನಾದ್ಯಂತ ಇರುವ ಏಕೈಕ ದಲಿತ ಸಂಸ್ಥೆಯು ಇರಬಾರದು ಎಂಬ ದುರಾಲೋಚನೆಯಿಂದ ಇದನ್ನು ಮುಚ್ಚಿಸಬೇಕು ಎಂದು ಈ ರೀತಿ ಪಿತೂರಿ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಗೌತಮ್ ಶಾಲೆಯ ಆಟದ ಮೈದಾನವನ್ನು ರೇಷ್ಮೆ ಇಲಾಖೆಗೆ ವಶಪಡಿಸಿಕೊಳ್ಳುವುದರ ಬಗ್ಗೆ ಆರೋಪಿಸಿ ಪೋಷಕರಾದ ಶೋಭಾ ನಾಗರತ್ನಮ್ಮ ಅವರು ಮಾತನಾಡಿ ಪಟ್ಟಣದಲ್ಲಿರುವ ಗೌತಮ್ ಶಾಲೆಯಲ್ಲಿ ಅತಿ ಹೆಚ್ಚು ನಮ್ಮ ದಲಿತ ಮಕ್ಕಳು ವ್ಯಾಸಂಗ ಮಾಡುತ್ತಿದ್ದು ನಮ್ಮ ಮಕ್ಕಳು ಸಹ 10/ 12 ವರ್ಷಗಳಿಂದ ಇಲ್ಲೇ ಓದುತ್ತಿದ್ದಾರೆ.
ಇತರೆ ಖಾಸಗಿ ಶಾಲೆಯಲ್ಲಿ 30 ರಿಂದ 70 ಸಾವಿರ ರೂಗಳಷ್ಟು ಶುಲ್ಕ ಪಡೆಯುತ್ತಿದ್ದಾರೆ. ಬಡವರ್ಗದವರು ಅಂತಹ ಶಾಲೆಯಲ್ಲಿ ಓದಿಸಲು ಕಷ್ಟವಾಗುತ್ತದೆ. ಈ ಶಾಲೆಯಲ್ಲಿ ಉತ್ತಮ ವ್ಯಾಸಂಗ ನೀಡುತ್ತಿದ್ದು ಅತಿ ಕಡಿಮೆ ಐದಾರು ಸಾವಿರ ಶಾಲಾ ಶುಲ್ಕವನ್ನು ಪಡೆದು ಶಿಕ್ಷಣ ನೀಡುತ್ತಿದ್ದಾರೆ. ಮಕ್ಕಳು ಸಹ ಚೆನ್ನಾಗಿ ಓದುತ್ತಿದ್ದಾರೆ.
ಶಾಲೆಯಲ್ಲಿ ಮಕ್ಕಳಿಗೆ ಆಟದ ಮೈದಾನ ಊಟದ ವ್ಯವಸ್ಥೆಗೆ ಇರುವಂತಹ ಜಾಗವನ್ನು ರಾಜಕೀಯ ಹಿತಾಸಕ್ತಿಗಳಿಂದ ರೇಷ್ಮೆ ಇಲಾಖೆಗೆ ವಶಪಡಿಸಿಕೊಳ್ಳುವ ಹುನ್ನಾರ ಮಾಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಆಟದ ಮೈದಾನದ ಸಮಸ್ಯೆಯಾಗುತ್ತದೆ ಶೈಕ್ಷಣಿಕ ಕ್ರೀಡಾ ಪ್ರಗತಿಗೂ ತೊಂದರೆಯಾಗಲಿದೆ. ಆಟದ ಮೈದಾನವನ್ನು ರೇಷ್ಮೆ ಇಲಾಖೆಯ ಸುಪರ್ದಿಗೆ ವಶಪಡಿಸಿಕೊಳ್ಳುವುದು ಮುಂದಾದರೆ ಮುಂದಿನ ದಿನಗಳಲ್ಲಿ ನಾವೆಲ್ಲರೂ ಶಿಕ್ಷಣ ಸಂಸ್ಥೆಯವರು ಜೊತೆಗೂಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗೌತಮ್ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಲಿಂಗರಾಜು, ಶಿಕ್ಷಕ ಪುನೀತ್, ಶಿಕ್ಷಕಿಯರಾದ ಆಶಾ, ಪುಷ್ಪಲತಾ ಪೋಷಕರಾದ ಗೌರಮ್ಮ, ಮಹಾದೇವಮ್ಮ, ದೊಡ್ಡಮ್ಮ, ಕವಿತಾ, ಮಾಲಾ, ಭಾಗ್ಯ, ಮನು, ಮಂಟೇಸ್ವಾಮಿ ಸೇರಿದಂತೆ ಇನ್ನಿತರ ಪೋಷಕರು ಶಾಲೆಯ ಸಿಬ್ಬಂದಿಗಳು ಇದ್ದರು.

Post Comment